VIDEO| ಗುಟ್ಕಾ ಉಗುಳಿದ ಎಂಬ ಕಾರಣಕ್ಕೆ ಯುವಕನನ್ನು ಅಮಾನುಷವಾಗಿ ಥಳಿಸಿದ ಪೊಲೀಸ್​ ಅಧಿಕಾರಿ

Police Assault
Published on

ಭೋಪಾಲ್​: ಆಘಾತಕಾರಿ ಘಟನೆಯೊಂದರಲ್ಲಿ ಯುವಕನೋರ್ವ ರಸ್ತೆಯ ಮೇಲೆ ಗುಟ್ಕಾ ಉಗುಳಿದ ಎಂಬ ಕಾರಣಕ್ಕೆ ಆತನ ಮೇಲೆ ಪೊಲೀಸ್​ ಅಧಿಕಾರಿಯೊಬ್ಬರು ಜನನಿಬಿಡ ಪ್ರದೇಶದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬಿಹಾರದ ಸಮಸ್ತೀಪುರ ಜಿಲ್ಲೆಯಲ್ಲಿ ನಡೆದಿದೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೆನ್ನಲ್ಲೇ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿನಯ್​ ತಿವಾರಿ ಪ್ರತಿಕ್ರಿಯಿಸಿದ್ದು, ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಘಟನೆಯ ಹಿನ್ನಲೆ

ಸಮಸ್ತೀಪುರ ಜಿಲ್ಲೆಯ ಗೋಲಂಬರ್​ ಇರುವ ಪಟೇಲ್​ ಮೈದಾನದ ಬಳಿ ಯುವಕ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ನೋಡದೆ ರಸ್ತೆ ಮೇಲೆ ಗುಟ್ಕಾ ಉಗುಳಿದ್ದಾನೆ. ಈ ವೇಳೆ ರಸ್ತೆಯ ಪಕ್ಕದಲ್ಲೇ ತೆರಳುತ್ತಿದ್ದ ಪೊಲೀಸ್​ ಅಧಿಕಾರಿಯ ಆತ ಉಗುಳಿದ ಗುಟ್ಕಾ ಸಮವಸ್ತ್ರದ ಮೇಲೆ ಬಿದ್ದಿದ್ದು, ಕೂಡಲೇ ಬಸ್ಸನ್ನು ನಿಲ್ಲಿಸಿ ಯುವಕನನ್ನು ಬಲವಂತವಾಗಿ ಹೊರಗೆ ಎಳೆದು ತಂದಿದ್ದಾರೆ.

ಬಳಿಕ ಆತನ ಮೇಲೆ ಜನನಿಬಿಡ ಪ್ರದೇಶದಲ್ಲಿ ಹಲ್ಲೆ ನಡೆಸಿದ ಅಧಿಕಾರಿ ಬಳಿಕ ಆತ ನೆಲಕ್ಕೆ ಉಗುಳಿದ ಗುಟ್ಕಾವನ್ನು ನೆಕ್ಕಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅಮಾನುಷವಾಗಿ ವರ್ತಿಸಿದ ಅಧಿಕಾರಿಯ ನಡೆಯನ್ನು ಸಾರ್ವಜನಿಕರು ತಕ್ಷಣವೇ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಹಲ್ಲೆಗೊಳಗಾದ ಯುವಕನನ್ನು ಭರತ್​ ಕುಮಾರ್​ ಎಂದು ಗುರುತಿಸಲಾಗಿದ್ದು, ಮುಜಾಫರ್ನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್​ ಇಲಾಖೆ ಕರ್ತವ್ಯ ಲೋಪ ಎಸಗಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿದ್ದು, ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ತನಿಖೆ ನಡೆಸಿ ವಿಸ್ತೃತ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿನಯ್​ ತಿವಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net