ಕಾಲವೂ ಕೂಡಿ ಬರುತ್ತದೆ, ಜೆಡಿಎಸ್ ಅಧಿಕಾರ ಹಿಡಿಯಲಿದೆ: ಎಚ್​.ಡಿ. ದೇವೇಗೌಡ

HD Devegowda
Published on

ಬೆಂಗಳೂರು: ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಬಜೆಟ್​ ಅಧಿವೇಶನದಲ್ಲಿ ಭಾಗಿಯಾಗಲಿರುವ ಜೆಡಿಎಸ್​ ಪಕ್ಷದ ಶಾಸಕರಿಗೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಎಚ್​ಡಿಡಿ ಕಾಲವೂ ಕೂಡಿ ಬರುತ್ತದೆ, ರಾಜ್ಯದಲ್ಲಿ ಜೆಡಿಎಸ್ ಸರಕಾರವೂ ಬರುತ್ತದೆ. ಪಕ್ಷದಲ್ಲಿ ನಿಷ್ಠರಾಗಿ ಉಳಿಯುವ ಎಲ್ಲರಿಗೂ ಅಧಿಕಾರ, ಜನರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.

ಪತ್ರಿಕೆಗಳನ್ನು ಓದಿ, ಹೋರಾಡಿ

ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸುವ ಕುರಿತು ಶಾಸಕರಿಗೆ ಟಿಪ್ಸ್​ ನೀಡಿದ ಎಚ್​ಡಿಡಿ ಪತಿಕ್ರೆಗಳನ್ನು ಗಂಭೀರವಾಗಿ ಓದುವಂತೆ, ಸುದ್ದಿ ಮಾಧ್ಯಮಗಳನ್ನು ಗಮನಿಸುವಂತೆ ಸಲಹೆ ನೀಡಿದ್ದಾರೆ.

HD Devegowda

ಜನರ ಸಮಸ್ಯೆಗಳನ್ನು ಸರಕಾರದ ಮುಖಕ್ಕೆ ಹಿಡಿಯಿರಿ. ಹೋರಾಡುವುದಕ್ಕೆ ಅಂಜಿಕೆ, ಅಳಲು ಏಕೆ. ಇವತ್ತಿನ ರಾಜ್ಯ ಮತ್ತು ದೇಶದ ರಾಜಕಾರಣ ಗೊಂದಲಮಯವಾಗಿದೆ. ನಾವು ಜನನಿಷ್ಠರಾಗಿ ಅವರ ಜತೆ ನಿಲ್ಲೋಣ ಎಂದು ಶಾಸಕರನ್ನು ಹುರಿದುಂಬಿಸಿದ್ದಾರೆ.

ಛಲವಿದ್ದರೆ ಗೆಲುವು ಖಚಿತ

ಯಾರೂ ಎದೆಗುಂದಬೇಕಿಲ್ಲ. ಪಕ್ಷ ಕಟ್ಟಿ. ಸೋಲಿನಿಂದ ಹತಾಶರಾಗುವುದು ಬೇಡ. ಛಲವಿದ್ದರೆ ಗೆಲುವು ಖಚಿತ. ಅಧೈರ್ಯವೇ ಅವಸಾನಕ್ಕೆ ನಾಂದಿ ಆಗುತ್ತದೆ ಎಚ್ಚರ ಇರಲಿ. ಪಕ್ಷವನ್ನು ಉಳಿಸಲೇಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಮಾಡೋಣ ಎಂದು ಹೇಳಿದ್ದಾರೆ.

ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕಗಳ ಪುನಾರಚನೆ, ನೂತನ ಕೋರ್ ಕಮಿಟಿ ರಚನೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಸಭೆಯಲ್ಲಿ ಪಕ್ಷದ ಮುಖಂಡರಿಗೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹಲವು ಸಲಹೆಗಳನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net