

ಡೆಹ್ರಾಡೂನ್: ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ 15 ವರ್ಷದ ಬಾಲಕಿಯ ಶವವನ್ನು ಗುರುವಾರ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಹೊರತೆಗೆದಿದ್ದಾರೆ. ಅತ್ಯಾಚಾರಕ್ಕೊಳಗಾಗಿರಬಹುದೆಂಬ ಸಂಶಯ ಮೂಡಿ ಬಂದಿದೆ. ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ.
ಮೃತಪಟ್ಟ ಅಪ್ರಾಪ್ತ ಬಾಲಕಿ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ತಂದೆ, ತಾಯಿ ಬೇರೆ ಬೇರೆ ಹಳ್ಳಿಗಳಲ್ಲಿ ವಾಸಿಸುತ್ತಿರುವುದರಿಂದ ಜಿಲ್ಲೆಯಲ್ಲಿ ತನ್ನ ಅಜ್ಜ ಅಜ್ಜಿಯರೊಂದಿಗೆ ವಾಸವಾಗಿದ್ದಳು. ಹಾಗೊಂದು ದಿನ ಆಕೆಗೆ ಅನಾರೋಗ್ಯದಲ್ಲಿ ಏರುಪೇರು ಕಂಡುಬಂದ ಕಾರಣ ಅಜ್ಜಿ ಮಂಗಳವಾರ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ವೈದ್ಯರು ಆಕೆ ಐದು ತಿಂಗಳ ಗರ್ಭಿಣಿ ಎಂದು ದೃಢಪಡಿಸಿ, ಬಾಗೇಶ್ವರದಲ್ಲಿ ಹೆಚ್ಚಿನ ಆರೋಗ್ಯ ಚಿಕಿತ್ಸೆಗೆ ಶಿಫಾರಸ್ಸು ಮಾಡಿದ್ದಾರೆ.
ಬಾಲಕಿಯನ್ನು ನಿಗದಿತ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಆಕೆಯ ಅಜ್ಜಿ ತನ್ನ ಮನೆಗೆ ಕರೆದೊಯ್ದರು. ಆಕೆಯ ತಂದೆ ಆಕೆ ಗರ್ಭಿಣಿ ಎಂದು ತಿಳಿದ ನಂತರ ಅಲ್ಲಿಗೆ ಬಂದು ಆಕೆಯನ್ನು ಗದರಿಸಿದ ಹಿಂತಿರುಗಿ ಹೋದರು. ಇಷ್ಟೆಲ್ಲಾ ಆದರೂ ಅವರು ಕೇವಲ 2 ಕಿ.ಮೀ ದೂರದ ಮತ್ತೊಂದು ಹಳ್ಳಿಯಲ್ಲಿ ವಾಸಿಸುವ ಹುಡುಗಿಯ ತಾಯಿಗೆ ಈ ಕುರಿತು ಏನೂ ತಿಳಿಸಿಲ್ಲ ಎಂದು ಇನ್ಸ್ಪೆಕ್ಟರ್ ಪ್ರಲ್ಹಾದ್ ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಮನೆಯಲ್ಲಿ ಆಕೆ ಸಾವಿಗೀಡಾಗಿರುವುದು ಕಂಡುಬಂದಿದೆ. ಕಾಂಡಾ ಬ್ಲಾಕ್‌ನ ಮಾಂಟೋಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆಕೆಯನ್ನು ಅವಳ ಕುಟುಂಬದವರು ರಹಸ್ಯವಾಗಿ ಸಮಾಧಿ ಮಾಡಿದ್ದಾರೆ” ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಪ್ರಾಪ್ತ ಬಾಲಕಿಯ ತಾಯಿ ಗುರುವಾರ ಬೆಳಿಗ್ಗೆ ಇಡೀ ಘಟನೆಯ ಬಗ್ಗೆ ತಿಳಿದು ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಜಿಲ್ಲಾಧಿಕಾರಿ ಅನುಮತಿ ಕೋರಿ ಅಪ್ರಾಪ್ತ ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಹೊರತೆಗೆದಿದ್ದಾರೆ. ಇದು ಮರ್ಯಾದೆಗೇಡು ಹತ್ಯೆಯ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.