ಪೊಲೀಸರ ಎದುರಲ್ಲೇ ಅಪಾಯಕಾರಿ ಸ್ಟಂಟ್​; ಅಧಿಕಾರಿಗಳ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ​ ನೆಟ್ಟಿಗರು

Stoppie
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಜನನಿಬಿಡ ಪ್ರದೇಶಗಳಲ್ಲಿ ಕೆಲವು ಪುಂಡರು ಅಪಾಯಕಾರಿ ಸ್ಟಂಟ್​ಗಳನ್ನು ಮಾಡುತ್ತ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿರುವ ಹಲವು ನಿದರ್ಶನಗಳು ನಮ್ಮ ಕಣ್ಣು ಮುಂದಿದೆ. ಈ ನಿಟ್ಟಿನಲ್ಲಿ ಪೊಲೀಸ್​ ಇಲಾಖೆಯೂ ನಾನಾ ರೀತಿಯ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗದಿರುವುದು ಬೇಸರದ ಸಂಗತಿ.

ಇದೀಗ ಘಟನೆಯೊಂದರಲ್ಲಿ ಇಬ್ಬರು ಯುವಕರು ಪೊಲೀಸ್​ ಚೌಕಿ ಮುಂಭಾಗದಲ್ಲೇ ಅಪಾಯಕಾರಿ ಬೈಕ್​ ಸ್ಟಂಟ್​ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಕ್ರಮ ಜರುಗಿಸಿರುವ ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ವಿಡಿಯೋದಲ್ಲಿ ಏನಿದೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕರಿಬ್ಬರು ವೇಗವಾಗಿ ಬೈಕ್​ ಓಡಿಸಿಕೊಂಡು ಬರುತ್ತಿರುವುದು ಕಂಡು ಬರುತ್ತದೆ. ಪೊಲೀಸ್​ ಚೌಕಿ ಕಂಡೊಡನೆ ಸವಾರ ಮುಂಬದಿ ಬ್ರೇಕ್​ ಹಿಡಿದು ಸ್ಟಾಪಿ (ಬ್ಯಾಕ್​ ವೀಲಿಂಗ್​) ಮಾಡುತ್ತಿರುವುದು ಕಂಡು ಬಡುತ್ತದೆ. ಈ ವಿಡಿಯೋವನ್ನು ಮತ್ತೊಂದು ಬೈಕಿನಲ್ಲಿ ಬರುತ್ತಿದ್ದ ಆತನ ಸ್ನೇಹಿತರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದರು.

ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಕಷ್ಟು ಖಂಡನೆಗೆ ಗುರಿಯಾಗಿತ್ತು. ಪೊಲೀಸ್​ ಚೌಕಿ ಮುಂಭಾಗದಲ್ಲೇ ಈ ರೀತಿ ಮಾಡಿದರೆ ಏನು ಅರ್ಥ ಎಂದು ಹಲವರು ಪ್ರಶ್ನಿಸಿದ್ದರು. ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಯುವಕನ ವಿರುದ್ಧ ತನಿಖೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಅಪ್ಲೋಡ್​ ಮಾಡಿ ಪುಂಡರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಪೊಲೀಸರ ಕಾರ್ಯವನ್ನು ಮೆಚ್ಚಿಕೊಂಡಿರುವ ನೆಟ್ಟಿಗರು ಈ ರೀತಿ ಮಾಡುವ ಪುಂಡರನ್ನು ಜೈಲಿಗೆ ಅಟ್ಟಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಅವನ ಲೈಸೆನ್ಸ್​ ರದ್ದುಪಡಿಸಿ ಆತನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಎಂದು ಹಲವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net