

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮ ಪ್ರಕರಣ ಸಂಬಂಧ 6 ಆರೋಪಿಗಳನ್ನು ಶನಿವಾರ ಸಿಐಡಿ ಪೊಲೀಸರು ಶನಿವಾರ ಬಂಧಿಸಿದ ಬೆನ್ನಲ್ಲೇ ಈ ಅಕ್ರಮದ ಸುಳಿಯ ಆಳ, ಅಗಲದ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮದ ಆರೋಪ ಇದೇ ಮೊದಲೇನಲ್ಲ. ಪ್ರತಿಬಾರಿ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಡಿಯುತ್ತದೆ. ಸಬ್ ಇನ್ಸ್ಪೆಕ್ಟರ್ ಹುದ್ದೆಗೆ 30 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಡೀಲ್ ನಡೆಯುತ್ತದೆ ಎಂದು ಇಲಾಖಾಧಿಕಾರಿಗಳೇ ಹೇಳುತ್ತಾರೆ. ಮಧ್ಯವರ್ತಿಗಳ ಜತೆ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ನೇಮಕಾತಿಗೆ ಕೈಜೋಡಿಸುತ್ತಿದ್ದಾರೆ. ಈಗಿನ 545 ಎಸ್ಐ ಹುದ್ದೆ ನೇಮಕಾತಿಯಲ್ಲೂ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕ ಸಿಬ್ಬಂದಿ ಸೇರಿ ಕೆಲ ಅಧಿಕಾರಿಗಳು ಅಕ್ರಮಕ್ಕೆ ಸಾಥ್ ಕೊಟ್ಟಿರುವ ವಿಚಾರ ಸಿಐಡಿ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಶನಿವಾರ ಕಲಬುರಗಿಯಲ್ಲಿ ಮೂವರು ಅಭ್ಯರ್ಥಿಗಳು ಹಾಗೂ ಮೂವರು ಪರೀಕ್ಷಾ ಕೇಂದ್ರದ ಮಹಿಳಾ ಮೇಲ್ವಿಚಾರಕರನ್ನು ಬಂಧಿಸಿದ್ದಾರೆ. ಅಕ್ರಮದಲ್ಲಿ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಶೀಘ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ತಲಾ ಹುದ್ದೆಗೆ 30 ಲಕ್ಷ ರೂ.ನಿಂದ 1 ಕೋಟಿ ರೂವರೆಗೆ ಡೀಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ನೇಮಕಾತಿ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಬದಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಿ ಬರೆಸಿರುವುದು ಬಯಲಾಗಿತ್ತು.
ಗೌಪ್ಯ ಸ್ಥಳದಲ್ಲಿ ಕುಳಿತು ಭರ್ತಿ: ಪೊಲೀಸ್ ನೇಮಕಾತಿ ಅಕ್ರಮ ದಂಧೆಯಲ್ಲಿ ಇದು ಹಳೇ ಪದ್ದತಿ. ಪರೀಕ್ಷೆ ನಡೆಯುವ ಹಿಂದಿನ ದಿನ ಓಎಂಆರ್ ಶೀಟ್ಗಳನ್ನು ಅಭ್ಯರ್ಥಿಗೆ ಕೊಟ್ಟು ಗೌಪ್ಯ ಸ್ಥಳದಲ್ಲಿ ಬರೆಸುವುದು ಅಥವಾ ಪ್ರಶ್ನೆಗಳನ್ನು ಕೊಟ್ಟು ಉತ್ತರಗಳನ್ನು ಹೇಳಿಕೊಟ್ಟು ನೇರ ಪರೀಕ್ಷಾ ಕೇಂದ್ರಕ್ಕೆ ಕರೆತರುವುದು. ಭರ್ತಿ ಮಾಡಿದ ಓಎಂಆರ್ ಶೀಟ್ಗಳನ್ನು ಪರೀಕ್ಷಾ ದಿನ ಸೀಲ್ಡ್ ಮಾಡಿ ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸುತ್ತಾರೆ.
ಪರಿವೀಕ್ಷಕರ ಬುಕಿಂಗ್: ಕೊಠಡಿ ಪರಿವೀಕ್ಷಕರನ್ನೇ ಬುಕ್ ಮಾಡಲಾಗುತ್ತದೆ. ತಮಗೆ ಬೇಕಾದ ಸೆಂಟರ್ಗೆ ಪರಿವೀಕ್ಷಕರನ್ನು ನೇಮಕ ಮಾಡಿಕೊಂಡು ಅವರ ಮೂಲಕ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವುದು, ಬ್ಲೂಟೂತ್ ಬಳಕೆಗೆ ಅಥವಾ ಉತ್ತರ ಹೇಳಿಕೊಡುವುದು, ಓಎಂಆರ್ ಶೀಟ್ನಲ್ಲಿ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಸೀಲ್ಡ್ ಮಾಡುವುದು. ಇಲ್ಲವಾದರೆ ಓಎಂಆರ್ ಶೀಟ್ ಖಾಲಿ ಬಿಟ್ಟಿರುವ ಅಭ್ಯರ್ಥಿಗಳ ಹೆಸರು, ನೋಂದಣಿ ಸಂಖ್ಯೆಯನ್ನು ಬರೆದು ದಾಖಲೆ ಮಾಡದೆ ನಿರ್ಲಕ್ಷ್ಯ ತೋರುವುದು. ಇದರಿಂದ ಮುಂದೆ ಪೊಲೀಸ್ ತನಿಖೆಗೆ ಅಡ್ಡಿ ಉಂಟಾಗುತ್ತದೆ. ಓಎಂಆರ್ ಶೀಟ್ ಖಾಲಿ ಬಿಟ್ಟ ಅಥವಾ ಬೇಗ ಕೊಠಡಿಯಿಂದ ಹೊರ ಹೋದ ಅಭ್ಯರ್ಥಿಗಳ ಹೆಸರು ಮತ್ತು ನೋಂದಣಿ ಸಂಖ್ಯೆ ದಾಖಲೆ ಮಾಡಿದ್ದರೆ ಅಂತಹ ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದರೆ ಸತ್ಯಾಂಶ ಹೊರಬರುತ್ತದೆ.
ಮೌಖಿಕ ಅಂಕ ಕೈಬಿಟ್ರು ತಪ್ಪಲಿಲ್ಲ: ನೇಮಕಾತಿ ಅಕ್ರಮ ತಡೆಯುವ ಉದ್ದೇಶದಿಂದ ಈ ಮೊದಲಿನ ವ್ಯವಸ್ಥೆಯಲ್ಲಿದ್ದ 10 ಅಂಕದ ಮೌಖಿಕ ಪರೀಕ್ಷೆ ಕೈಬಿಡಲಾಗಿತ್ತು. ಈ ಆದೇಶ ಜಾರಿಯಾದ ಮೇಲೆ ಮೊದಲ ಬ್ಯಾಚ್ 545 ಎಸ್ಐ ನೇಮಕಾತಿ ನಡೆದಿತ್ತು. ಈಗ ಇದಕ್ಕೂ ಸೆಡ್ಡು ಹೊಡೆದು ಅಕ್ರಮ ದಂಧೆ ನಡೆದಿದೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣದ ಸಂಬಂಧ ಶನಿವಾರ ಸಿಐಡಿ ಪೊಲೀಸರು ಬಂಧಿಸಿರುವ ಆರೋಪಿಗಳ ಪೈಕಿ ಮೂವರು ಪರೀಕ್ಷಾ ಮೇಲ್ವಿಚಾರಕರಾದರೆ, ಉಳಿದ ಮೂವರು ಅಭ್ಯರ್ಥಿಗಳಾಗಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಪರೀಕ್ಷೆ ಬರೆದ ರಾಯಚೂರಿನ ಪ್ರವೀಣಕುಮಾರ ಕೆ., ರಾಯಚೂರಿನಲ್ಲಿ ಜೈಲು ವಾರ್ಡನ್ ಆಗಿರುವ ಚೇತನ ನಂದಗಾಂವ, ಕಲಬುರಗಿಯ ಅರುಣ ಹಾಗೂ ಅಕ್ರಮ ನಡೆದಿರುವ ಜ್ಞಾನಜ್ಯೋತಿ ಶಾಲೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸಾವಿತ್ರಿ, ಸಿದ್ದಮ್ಮ ಮತ್ತು ಸುಮಾ ಬಂಧಿತರು. ಈ ಹಿಂದೆ ವೀರೇಶ ನಿಡಗುಂದಾ ಎಂಬಾತನನ್ನು ಸಿಐಡಿ ಬಂಧಿಸಿತ್ತು. ವೀರೇಶನ ತಂದೆ ಕಲಬುರಗಿ ಜಿಲ್ಲೆ ಸೇಡಂ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದಾರೆ.
ಬಿಜೆಪಿಯ ಪ್ರಭಾವಿ ನಾಯಕಿಯೊಬ್ಬರಿಗೆ ಸೇರಿರುವ ಜಿಡಿಎ ಬಡಾವಣೆ ಗೋಕುಲ್ ನಗರದಲ್ಲಿರುವ ಜ್ಞಾನಜ್ಯೋತಿ ಸ್ಕೂಲ್ ಕೇಂದ್ರದಲ್ಲಿ ಬಂಧಿತರೆಲ್ಲರೂ ಪರೀಕ್ಷೆ ಬರೆದಿದ್ದರು. ಬಂಧಿತ ವೀರೇಶ ಒಎಂಆರ್ ಶೀಟ್ನಲ್ಲಿ ಕೇವಲ 21 ಪ್ರಶ್ನೆಗೆ ಉತ್ತರ ಬರೆದಿದ್ದ. ನಂತರ ನೋಡಿದಾಗ ಎಲ್ಲ 100 ಪ್ರಶ್ನೆಗಳಿಗೆ ಉತ್ತರಿಸಿರುವುದು ಬೆಳಕಿಗೆ ಬಂದು, ಆತನನ್ನು ಬಂಧಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಬಂಧಿತ ಆರೋಪಿಗಳನ್ನು 4ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಭಾನುವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಸೋಮವಾರ ವಶಕ್ಕೆ ಪಡೆಯುವಂತೆ ಸಿಐಡಿಗೆ ಸೂಚಿಸಿದೆ.