

| ಮಂಜುನಾಥ ಕೆ. ಬೆಂಗಳೂರು
ಪೊಲೀಸ್ ಪರೀಕ್ಷೆ ನಡೆಯುವಾಗ ಹೆಡ್ ಕಾನ್ಸ್ಟೆಬಲ್ (ಎಚ್ಸಿ) ಮತ್ತು ಕಾನ್ಸ್ಟೆಬಲ್ಗಳಿಗೆ(ಪಿಸಿ) ನೀಡುವ ಗೌರವ ಧನ ಮತ್ತು ಆಹಾರ ಭತ್ಯೆ ಕೊಡದೆ ಹಿರಿಯ ಪೊಲೀಸ್ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಕೆಳಹಂತದ ಸಿಬ್ಬಂದಿ ಆರೋಪ ಮಾಡಿದ್ದಾರೆ.
ಲಿಖಿತ ಪರೀಕ್ಷೆಯ ದಿನ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಜತೆಗೆ ಪರೀಕ್ಷೆ ಮುಗಿದ ಬಳಿಕ ಸಂಬಂಧಪಟ್ಟ ಕಚೇರಿಗೆ ತಲುಪಿಸುವ ಕರ್ತವ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನೀಡಲಾಗುವ ಗೌರವಧನವನ್ನು ಕೆಲವರಿಗೆ ಮಾತ್ರ ಕೊಟ್ಟು ಉಳಿದ ಹಣವನ್ನು ಜೇಬಿಗೆ ಇಳಿಸಿಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.
ಪಿಎಸ್ಐ ಮತ್ತು ಪಿಸಿ ನೇಮಕಾತಿ ಲಿಖಿತ ಪರೀಕ್ಷೆ ನಡೆಯುವ ಹಿಂದಿನ ದಿನದಂದು (ಪೂರ್ವಭಾವಿ ಸಿದ್ದತೆಗಾಗಿ) ಪೊಲೀಸ್ ಸಿಬ್ಬಂದಿ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ತೆರಳಿ, ಪರೀಕ್ಷಾರ್ಥಿಗಳ ರಿಜಿಸ್ಟರ್ ನಂಬರನ್ನು ಬ್ಲಾಕ್ನ ಬೆಂಚ್ ಮೇಲೆ ಹಾಕುತ್ತಾರೆ. ಬೆಳಗ್ಗೆ 8 ಗಂಟೆಗೆ ಶುರುವಾಗುವ ಈ ಪ್ರಕ್ರಿಯೆ ರಾತ್ರಿ 8 ಗಂಟೆವರೆಗೆ ನಡೆಯುತ್ತದೆ. ಈ ವೇಳೆ ಪೊಲೀಸ್ ಸಿಬ್ಬಂದಿಗೆ ಸರಿಯಾಗಿ ಊಟ-ನೀರು ಸಹ ನೀಡವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಭದ್ರತಾ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಪ್ರತಿ ದಿನಕ್ಕೆ 500 ರೂ. ಅಂತೆ ಗೌರವಧನ ಅಲ್ಲಿಯೇ ನೀಡಬೇಕಾಗುತ್ತದೆ. ಆದರೆ ಪೊಲೀಸ್ ಇಲಾಖೆಯ ಪರೀಕ್ಷೆ ವೇಳೆ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯ ಹಾಜರಾತಿ ಸಂಗ್ರಹಿಸಿ, ಸಂಬಂಧಿಸಿದ ಮುಖ್ಯ ಅಧಿಕಾರಿ ಮತ್ತು ಲಿಪಿಕಾಧಿಕಾರಿಗಳು ಆ ಗೌರವಧನವನ್ನು ತಮ್ಮ ಜೇಬಿಗಿಳಿಸುತ್ತಾರೆ ಎಂದು ಕೆಲ ಸಿಬ್ಬಂದಿ ಆರೋಪಿಸಿದ್ದಾರೆ. ಇತರ ಇಲಾಖೆಯ ಪರೀಕ್ಷೆಯಲ್ಲಿ ದಲಾಯತರನ್ನು ಬಳಸಿಕೊಂಡಂತೆ ಪೊಲೀಸ್ ಇಲಾಖೆಯ ಪರೀಕ್ಷಾ ಕೆಲಸಕ್ಕೆ ದಲಾಯತರನ್ನು ಬಳಸಿಕೊಳ್ಳಬೇಕು ಎಂಬ ಕೂಗು ಇದೀಗ ಕೇಳಿ ಬಂದಿದೆ.
40 ಕೆಜಿ ಪೆಟ್ಟಿಗೆ ಹೊತ್ತವರಿಗಿಲ್ಲ ಹಣ: ಪರೀಕ್ಷಾ ದಿನದಂದು ಪತ್ರಿಕೆ ಹಾಗೂ ಸ್ಟೇಶನರಿಗಳನ್ನು ಸಂಗ್ರಹಿಸಿಟ್ಟಿರುವ ಭದ್ರತಾ ಕೊಠಡಿಗಳಿಂದ ಸುಮಾರು 30 ರಿಂದ 40 ಕೆಜಿ ತೂಕದ 4 ಪೆಟ್ಟಿಗೆಗಳನ್ನು ಹೊತ್ತು ಪೊಲೀಸ್ ವಾಹನಗಳಲ್ಲಿ ಇಡುವ ಎಚ್ಸಿ-ಪಿಸಿ ಸಿಬ್ಬಂದಿ, ನಂತರ ಭದ್ರತಾ ಕೊಠಡಿಯಿಂದ ಪರೀಕ್ಷಾ ಕೇಂದ್ರದ ವಿಲೇವಾರಿ ಕಚೇರಿಯೊಳಗಿಟ್ಟು ಬ್ಲಾಕ್ಗಳಿಗೆ ಹಂಚಿಕೆ ಮಾಡಬೇಕು. ಕೆಪಿಎಸ್ಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಶಿಕ್ಷಣ ಮತ್ತು ಕಂದಾಯ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುವ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ಜತೆಗ ಸ್ಟೇಶನರಿ ಪೆಟ್ಟಿಗೆಗಳನ್ನು ಪೊಲೀಸ್ ವಾಹನದಲ್ಲಿ ಹೇರುತ್ತಾರೆ.
ವಿತರಣೆಯಲ್ಲಿಯೂ ತಾರತಮ್ಯ: ರಾಘವೇಂದ್ರ ಔರಾದ್ಕರ್ ವರದಿಯಲ್ಲಿ ಪೊಲೀಸ್ ಇಲಾಖೆಯಲ್ಲಿನ ಎಫ್ಡಿಎ ಹುದ್ದೆಯನ್ನು ಎಚ್ಸಿ ಹುದ್ದೆಗೆ ಸಮಾನ ಎಂದು ಹೇಳಲಾಗಿದೆ. ಆದರೆ ಅವರಿಗೊಂದು ಗೌರವಧನ ಮತ್ತು ಎಚ್ಸಿ-ಪಿಸಿ ಸಿಬ್ಬಂದಿಗೊಂದು ಗೌರವ ಧನ ನೀಡಲಾಗುತ್ತಿದ್ದು, ತಾರತಮ್ಯ ಮಾಡಲಾಗುತ್ತಿದೆ. ದಾಖಲಾತಿಯಲ್ಲಿ ಇಷ್ಟು ಮಂದಿ ಸಿಬ್ಬಂದಿಗೆ ಗೌರವ ಧನ ನೀಡಲಾಗಿದೆ ಅಂತ ಹಿರಿಯ ಅಧಿಕಾರಿಗಳು ತೋರಿಸುತ್ತಾರೆ. ಆದರೆ ಕೇವಲ ಮೂರ್ನಾಲ್ಕು ಜನರಿಗೆ ಕೊಡುತ್ತಾರೆ. ಎರಡು ದಿನದ ಆಹಾರ ಭತ್ಯೆ ಖರ್ಚು ಕೂಡಾ ಹಾಕಲಾಗುತ್ತದೆ. ಅದನ್ನು ಸರಿಯಾಗಿ ನೀಡದೆ ವಂಚಿಸಲಾಗುತ್ತಿದೆ.