ಹೇರ್​ ಕಟಿಂಗ್​ ಶಪಥ! ತನೂರ್​ ದೋಣಿ ದುರಂತದಲ್ಲಿ ಮೃತಪಟ್ಟ ಪೊಲೀಸ್​ ಅಧಿಕಾರಿ ನೆನೆದು ಜನರ ಕಣ್ಣೀರು

Kerala Police
Published on

ಮಲಪ್ಪುರಂ: ಭಾನುವಾರ ಸಂಜೆ (ಮೇ.7) ಕೇರಳದ ತನೂರ್​ನಲ್ಲಿ ನಡೆದ ಟೂರಿಸ್ಟ್​ ಬೋಟ್​ ದುರಂತದಲ್ಲಿ 22 ಮಂದಿ ಸಾವಿಗೀಡಾಗಿದ್ದಾರೆ. ಕೇರಳ ಪಾಲಿಗೆ ಅತ್ಯಂತ ದುರಂತದ ಘಟನೆಗಳಲ್ಲಿ ಇದು ಕೂಡ ಒಂದು. ಮೃತರಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳಾ ಪ್ರಯಾಣಿಕರು ಸೇರಿದ್ದಾರೆ.

ಇಬ್ಬರು ಪುರುಷರು ಸಹ ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬರ ಹೆಸರು ಸಬರುದ್ಧೀನ್. ಇವರು ತನೂರು ಪೊಲೀಸ್ ಠಾಣೆಯ ಬುದ್ಧಿವಂತ ಪೊಲೀಸ್​ ಅಧಿಕಾರಿ. ಮಲಪ್ಪುರಂ ಪೊಲೀಸ್​ ವರಿಷ್ಠಾಧಿಕಾರಿ ವಿಶೇಷ ದಳದ ಸದಸ್ಯರಾಗಿದ್ದರು.

ತಮ್ಮ ವೃತ್ತಿ ಜೀವನದಲ್ಲಿ ಸಬರುದ್ದೀನ್‌ ತಮ್ಮ ಶೌರ್ಯದಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಒಮ್ಮೆ ಸಬರುದ್ದೀನ್​ ಅವರು ಹೇರ್​ ಕಟಿಂಗ್​ಗಾಗಿ ಕ್ಷೌರಿಕನ ಅಂಗಡಿಗೆ ಹೋಗಿದ್ದರು. ಇದೇ ಸಮಯಕ್ಕೆ ಠಾಣೆಯ ಆವರಣದ ಬಳಿ ಸ್ಕೂಟರ್ ದರೋಡೆ ಮಾಡಿದ ಸುದ್ದಿ ಬಂದಿತು. ಸಿಸಿಟಿವಿ ಪರಿಶೀಲಿಸಲಾದಾಗ ಆರೋಪಿಯನ್ನು ನೋಡಲಾಗಿತ್ತಾದರೂ ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಗುರುತು ಪತ್ತೆಯಾಗಿಲ್ಲ. ಈ ಸುದ್ದಿ ಕೇಳಿದ ಬಳಿಕ ಸಬರುದ್ದೀನ್ ಕ್ಷೌರದಂಗಡಿಯ ತನ್ನ ಸೀಟಿನಿಂದ ಜಿಗಿದು ಅವಸರದಲ್ಲಿ ಠಾಣೆಗೆ ಹೊರಟನು. ಅಪರಾಧಿಯನ್ನು ಹಿಡಿಯುವವರೆಗೂ ಕ್ಷೌರ ಮಾಡುವುದಿಲ್ಲ ಎಂದು ತನ್ನ ಸಹೋದ್ಯೋಗಿಗಳಿಗೆ ಶಪಥ ಮಾಡಿದರು.

ಶಪಥ ಮಾಡಿದ ಎಂಟು ದಿನಗಳ ನಂತರ ಸಬರುದ್ದೀನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಸಲೇಶ್ ಅವರು ಸ್ಕೂಟರ್ ದರೋಡೆಕೋರನನ್ನು ಹಿಡಿದರು. ಇದಾದ ಬಳಿಕವೇ ಸಬರುದ್ಧೀನ್‌ ಕ್ಷೌರ ಮಾಡಲು ತೆರಳಿದ್ದರು. ಇದೀಗ ದೋಣಿ ದುರಂತದಲ್ಲಿ ಸಬರುದ್ಧೀನ್‌ ಸಾವಿಗೀಡಾಗಿದ್ದು ಸ್ಥಳೀಯ ಜನರು ಕಂಬನಿ ಮಿಡಿಯುತ್ತಿದ್ದಾರೆ.

ಮಲಪ್ಪುರಂ ಜಿಲ್ಲೆಯ ತಾನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಭಾನುವಾರ ಸಂಜೆ 7 ಘಂಟೆ ಸುಮಾರಿಗೆ ದೋಣಿ ದುರಂತ ಸಂಭವಿಸಿದೆ. ಬೋಟ್​ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನ ಬಂಧನವಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net