More

    ರಾಜ್ಯಕ್ಕೆ ಎದುರಾಗಲಿದೆ ನಾಯಕತ್ವ ಕೊರತೆ: ಹಲವು ಹಿರಿಯ ನಾಯಕರಿಗೆ ಇದು ಕೊನೆಯ ಚುನಾವಣೆ..

    ಬೆಂಗಳೂರು: ರಾಜ್ಯದ ಬಹುತೇಕ ರಾಜಕೀಯ ನಾಯಕರಿಗೆ ಇದೇ ಕೊನೆಯ ಚುನಾವಣೆ ಆಗಿರುವುದರಿಂದ, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ಸಮರ್ಥ ನಾಯಕತ್ವದ ಕೊರತೆ ಕಾಡಲಿದೆಯೇ? ಇಂತಹದೊಂದು ಪ್ರಶ್ನೆ ರಾಜ್ಯದ ಸಾರ್ವತ್ರಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅನೇಕ ಹಿರಿಯ ನಾಯಕರೇ ಅಲ್ಲದೇ ಕೆಲ ಶಾಸಕರು ಸಹ ಇದೇ ನನ್ನ ಕೊನೆಯ ಚುನಾವಣೆ ಎಂದೇ ಪ್ರಚಾರದಲ್ಲಿ ತೊಡಗಿದ್ದಾರೆ. ಇದರಿಂದಾಗಿಯೇ ಇಂತಹ ಪ್ರಶ್ನೆ ಈಗ ಎದುರಾಗಿದೆ.

    ಚುನಾವಣಾ ರಾಜಕೀಯದಿಂದ ದೂರ ಸರಿಯಲು ಮುಂದಾಗಿರುವವರೆಲ್ಲ ಹಿರಿಯ ನಾಯಕರಾಗಿದ್ದಾರೆ. ವಿಧಾನಮಂಡಲದಲ್ಲಿ ಸಮರ್ಥವಾಗಿ ಚರ್ಚೆ ನಡೆಸುವ ಮೂಲಕ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಿಂಬಿಸುವವರಾಗಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಉಭಯ ಸದನಗಳಲ್ಲಿ ಗಣಿ, ರಿಯಲ್ ಎಸ್ಟೇಟ್ ಹೀಗೆ ಹಣವಂತರು ಬರುತ್ತಿರುವುದರಿಂದ ಕಾರ್ಯಕಲಾಪಗಳ ಗುಣಮಟ್ಟ ಕುಸಿಯಲಾರಂಭಿಸಿದೆ. ಬಹುತೇಕರ ಆದ್ಯತೆಗಳೇ ಬೇರೆಯಾಗಲಾರಂಭಿಸಿವೆ. ಸದನದಲ್ಲಿ ಸರಿಯಾದ ಚರ್ಚೆಗಳೇ ನಡೆಯದಿದ್ದರೆ ರಾಜ್ಯದ ಸಮಸ್ಯೆಗಳನ್ನು ಗಟ್ಟಿಯಾದ ದನಿಯಲ್ಲಿ ಬಿಂಬಿಸುವವರ ಕೊರತೆ ಕಾಡುವುದಂತೂ ನಿಶ್ಚಿತ.

    ಎರಡು ಕಾರಣ: ಅನೇಕ ನಾಯಕರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಕ್ಕೆ ಎರಡು ಕಾರಣಗಳನ್ನು ಗುರುತಿಸಲಾಗುತ್ತಿದೆ. ಮೊದಲನೆಯದು ವಯಸ್ಸು. ಬಹುತೇಕರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಚುನಾವಣಾ ರಾಜಕೀಯದಿಂದ ದೂರವಾಗುತ್ತಿದ್ದಾರೆ. ಎರಡನೇಯ ಕಾರಣ ಚುನಾವಣೆಗಳು ಇತ್ತೀಚಿನ ವರ್ಷಗಳಲ್ಲಿ ದುಬಾರಿಯಾಗಲಾರಂಭಿಸಿವೆ. ಅದು ಬಹುತೇಕರಿಗೆ ಚುನಾವಣಾ ವ್ಯವಸ್ಥೆಯ ಬಗ್ಗೆಯೇ ವಾಕರಿಕೆ ಬರಲಾರಂಭಿಸಿದೆ.

    ಸಮೂಹ ನಾಯಕರ ಕೊರತೆ: ರಾಜ್ಯದಲ್ಲಿ ಇರುವುದು ಕೇವಲ ಮೂರು ಜನ ಸಮೂಹ ನಾಯಕರು. ಅವರೆಂದರೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ. ಈಗಾಗಲೆ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ದೇವೇಗೌಡರು ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಕೊನೆಯದೆಂದು ಹೇಳಿದ್ದಾರೆ. ಸಿದ್ದರಾಮಯ್ಯ ಸಹ ಇದೇ ಚುನಾವಣೆ ಕೊನೆಯದೆಂದು ಘೋಷಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಸಮೂಹ ನಾಯಕರ ಕೊರತೆ ರಾಜ್ಯವನ್ನು ಕಾಡುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಈಗಾಗಲೆ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಹಣ ಹಾಗೂ ಜಾತಿಯೇ ಪ್ರಮುಖ ಪಾತ್ರ ವಹಿಸುತ್ತದೆ. ಆಗ ನಾಯಕತ್ವ ಬೆಳೆಯಲು ಸಾಧ್ಯವಿಲ್ಲವೆಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

    ಹಿಂದೆ ಸರಿದವರು: ಈ ಚುನಾವಣೆಯಲ್ಲಿಯೇ ಅನೇಕರು ಕಣದಿಂದ ಹಿಂದೆ ಸರಿದಿದ್ದಾರೆ. ಬಿಜೆಪಿಯಲ್ಲಿ ಪಕ್ಷದ ವರಿಷ್ಠರು ಕೈಗೊಂಡ ನಿರ್ಧಾರದಿಂದ ಅನಿವಾರ್ಯವಾಗಿ ಕೆಲವರು ಹಿಂದೆ ಸರಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾವೇ ಮುಂದಾಗಿ ಮೊದಲಿಗೆ ಘೋಷಣೆ ಮಾಡಿದ್ದರು. ಮಾಜಿ ಸಚಿವರಾದ ರವೀಂದ್ರನಾಥ್, ಕೆ.ಎಸ್. ಈಶ್ವರಪ್ಪ, ಶಾಸಕ ಹಾಲಾಡಿ ಶ್ರೀನಿವಾಸಶೆಟ್ಟಿ, ಕಾಂಗ್ರೆಸ್​ನಲ್ಲಿ ಮಾಜಿ ಸ್ಪೀಕರ್ ಕೋಳಿವಾಡ, ಕಾಗೋಡು ತಿಮ್ಮಪ್ಪ, ಶ್ರೀನಿವಾಸ್ ಹೀಗೆ ಅನೇಕರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ.

    ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿ. ಸೋಮಣ್ಣ, ಬಿ.ಜಿ. ಗೋವಿಂದಪ್ಪ, ಜಿ.ಎಚ್. ತಿಪ್ಪಾರೆಡ್ಡಿ, ಜಿ.ಟಿ. ದೇವೇಗೌಡ, ರಮೇಶ್​ಕುಮಾರ್, ಪರಮೇಶ್ವರ್, ಆರ್.ವಿ. ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಬಾಬುರಾವ್ ಚಿಂಚನಸೂರು, ರೇವುನಾಯಕ ಬೆಳಮಗಿ, ಬೆಳ್ಳುಬ್ಬಿ, ಎಚ್.ವೈ. ಮೇಟಿ, ಕೆ.ಜಿ. ಬೋಪಯ್ಯ, ಸುರೇಶ್​ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗೆ ಅನೇಕರ ಪಾಲಿಗೆ ಇದು ಕೊನೆಯ ಚುನಾವಣೆ ಆಗುವ ಸಾಧ್ಯತೆಗಳಿವೆ. ಕೆಲವರು ತಾವಾಗಿಯೇ ಚುನಾವಣಾ ರಾಜಕೀಯದಿಂದ ದೂರ ಸರಿಯುವ ಮಾತನ್ನು ಹೇಳುತ್ತಿದ್ದಾರೆ. ಮತ್ತೆ ಕೆಲವರಿಗೆ ಅವರ ಪಕ್ಷವೇ ಚುನಾವಣಾ ಕಣದಿಂದ ಹಿಂದೆ ಸರಿಸುವ ಸಾಧ್ಯತೆಗಳು ಇವೆ ಎಂದೇ ರಾಜಕೀಯ ಪಕ್ಷಗಳ ವಲಯದಲ್ಲಿ ಚರ್ಚೆಗಳಾಗುತ್ತಿವೆ. ಕೆಲವರಿಗೆ ಈ ಚುನಾವಣೆಯೇ ಕೊನೆಯದಾಗಬೇಕಾಗಿತ್ತು. ಆದರೆ ಸಮರ್ಥ ಅಭ್ಯರ್ಥಿಗಳ ಕೊರತೆಯ ಕಾರಣಕ್ಕೆ ಟಿಕೆಟ್ ಸಿಕ್ಕಿದೆ.

    ಸಮರ್ಥ ನಾಯಕತ್ವ ಕೊರತೆ ಕಾರಣಗಳು

    • ಹಣ ಹಾಗೂ ಜಾತಿಯ ಬಲದಿಂದ ಗೆದ್ದು ಬರುವುದು
    • ಸದನದ ಕಲಾಪಗಳಲ್ಲಿ ಗಂಭೀರವಾಗಿ ಭಾಗವಹಿಸದೇ ಇರುವುದು
    • ಹಿಂದಿನ ಕಲಾಪದ ಚರ್ಚೆಗಳನ್ನು ಅಧ್ಯಯನ ಮಾಡದಿರುವುದು
    • ವಿಧಾನಮಂಡಲ ಗ್ರಂಥಾಲಯದ ಕಡೆ ತಲೆ ಹಾಕದಿರುವುದು
    • ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇಲ್ಲದಿರುವುದು

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts