ಸಿನಿಮಾ

ವೀರಶೈವ-ಲಿಂಗಾಯತರನ್ನು ಸೆಳೆಯುವ ಯತ್ನ ಫಲಿಸದು: ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಕಿಡಿ

ಬೆಂಗಳೂರು: ಕಾಂಗ್ರೆಸ್​ನವರು ಏನೆಲ್ಲ ಕಸರತ್ತು ನಡೆಸಿದರೂ ವೀರಶೈವ-ಲಿಂಗಾಯತರನ್ನು ಸೆಳೆಯುವ ಪ್ರಯತ್ನ ಫಲಿಸುವುದಿಲ್ಲ. ಸಮುದಾಯದ ಜನರು ಎಂದಿನಂತೆ ಬಿಜೆಪಿ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸದ ನುಡಿಗಳನ್ನಾಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಬಹಿರಂಗ ಪ್ರಚಾರದ ಸಮಗ್ರ ಚಿತ್ರಣವನ್ನು ಬಿಚ್ಚಿಟ್ಟ ಬಿಎಸ್​ವೈ, ಪ್ರಧಾನಿ ಮೋದಿ ಅಭಿವೃದ್ಧಿ ಚಿಂತನೆ, ಡಬಲ್ ಇಂಜಿನ್ ಸರ್ಕಾರದ ಸಾಧನೆಯು ಬಿಜೆಪಿ ಪರವಾದ ವಾತಾವರಣ ನಿರ್ವಿುಸಿದೆ ಎಂದರು.

ಕಾಂಗ್ರೆಸ್​ನವರು ಅಧಿಕಾರದಲ್ಲಿದ್ದಾಗ ವೀರಶೈವ-ಲಿಂಗಾಯತರು ನೆನಪಾಗಲಿಲ್ಲ. ಈಗ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ವೀರಶೈವ- ಲಿಂಗಾಯತರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಎಲ್ಲ ವರ್ಗಗಳ ಬೆಂಬಲ: ಹಿಂದೆ ವೀರಶೈವ- ಲಿಂಗಾಯತ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಲು ಪ್ರಯತ್ನಿಸಿದ್ಸನ್ನು ಸಮುದಾಯದ ಜನರು ಮರೆತಿಲ್ಲ. ಎಲ್ಲ ಜಾತಿ, ವರ್ಗಗಳ ಬೆಂಬಲವು ಲಭಿಸಿರುವ ಕಾರಣ 135 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ಪುನರುಚ್ಚರಿಸಿದರು.

ವಿವಿಧ 60-70 ಮಠಾಧೀಶರು ಖುದ್ದು ಭೇಟಿಯಾಗಿ ರ್ಚಚಿಸಿದ್ದಾರೆ. ಮೋದಿ ನಾಯಕತ್ವ ದೇಶಕ್ಕೆ ಅಗತ್ಯವಿದ್ದು, ರಾಜ್ಯದ ಹಿತದೃಷ್ಟಿಗೆ ಪೂರಕವಾಗಲಿದೆ. ಸಮುದಾಯದಲ್ಲಿ ಒಡಕುಂಟು ಮಾಡುವ ಯಾವುದೇ ಪ್ರಯತ್ನ ನಡೆಯುವುದಿಲ್ಲ ಎಂಬ ವಿಶ್ವಾಸ ತುಂಬಿದ್ದಾರೆ ಎಂದು ಹೇಳಿದರು.

ವೀರಶೈವ-ಲಿಂಗಾಯತರು ಮಾತ್ರವಲ್ಲ ಎಲ್ಲ ಜಾತಿ-ವರ್ಗಗಳು ಬೆಂಬಲಿಸುತ್ತಿವೆ. ಬಿಜೆಪಿ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ, ಧರ್ವಧಾರಿತ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಿದ್ದನ್ನು ಮೋದಿ ಪ್ರಚಾರ ಸಭೆಯಲ್ಲಿ ಬಿಂಬಿಸಿದ್ದು, ರಾಜ್ಯ ಸರ್ಕಾರದ ಸಾಧನೆಯೂ ಗೊತ್ತಿದೆ. ಪರಿಶಿಷ್ಟ ಜಾತಿ, ಪಂಗಡಗಳು, ಒಕ್ಕಲಿಗರು ಹಾಗೂ ವೀರಶೈವ-ಲಿಂಗಾಯತರಿಗೆ ಮೀಸಲು ಹೆಚ್ಚಳ, ಎಸ್​ಸಿ ಮೀಸಲು ವರ್ಗೀಕರಣ ಮುಂತಾದ ಐತಿಹಾಸಿಕ ನಿರ್ಣಯಗಳಿಂದ ಶೋಷಿತರು ಸಿಂಹಪಾಲು ಬಿಜೆಪಿ ಪರವಾಗಿದ್ದಾರೆ.

ಬಸವತತ್ವ ಆಧಾರಿತ ಆಡಳಿತ: ಮೋದಿ ಅವರು ಬಸವತತ್ವದ ಆಧಾರದಲ್ಲಿ ಆಡಳಿತ ನಡೆಸುತ್ತಿದ್ದು, ರಾಜ್ಯದ ಆಡಳಿತ ಅದೇ ದಾರಿಯಲ್ಲಿದೆ. ಸರ್ವರಿಗೂ ಸಮಬಾಳು, ಸಮಪಾಲು ರೀತಿಯಲ್ಲಿ ಡಬಲ್ ಇಂಜಿನ್ ಸರ್ಕಾರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು. ಕಾರ್ಯಕ್ರಮಗಳಲ್ಲಿ ಹೆಚ್ಚಿನ ಫಲಾನುಭವಿಗಳು ಮುಸ್ಲಿಮರೇ ಆಗಿದ್ದು, ಅವರೂ ಬಿಜೆಪಿಗೆ ಸಹಕರಿಸಲಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ, ವಿಶ್ವಾಸವಿದ್ದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ಮುಸ್ಲಿಂ ಸಮುದಾಯವನ್ನು ಪರಿಗಣಿಸುತ್ತೇವೆ ಎಂಬ ಭರವಸೆ ನೀಡಿದರು.

ಬಹುಮತ ನಿಶ್ಚಿತ, ಖಚಿತ: ಕೇಂದ್ರ ಸರ್ಕಾರದ ಕೊಡುಗೆಗಳು, ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟಿದ್ದು, ಪ್ರಗತಿ ವೇಗವೂ ಜನರಿಗೆ ಮನವರಿಕೆಯಾಗಿದೆ. ಮೋದಿ ಕೈಬಲಪಡಿಸಲು ರಾಜ್ಯ ಜನರು ಬೆಂಬಲಿಸಿ ಬಹುಮತ ನೀಡುವುದು ನಿಶ್ಚಿತ.

ಡಿಯರ್ ಫ್ರೆಂಡ್ಸ್ ನೀವು (ಮಾಧ್ಯಮದವರು) ಇವತ್ತೇ ಬರೆದಿಟ್ಟುಕೊಳ್ಳಿ. ವರುಣದಲ್ಲಿ ಸೋಮಣ್ಣ ಜಯಭೇರಿ ಬಾರಿಸಲಿದ್ದಾರೆ. ಸಿದ್ದರಾಮಯ್ಯ ಸೋಲುವುದು ಖಚಿತ. ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ನನ್ನನ್ನು ಕೇಳಿರಿ ಎಂದು ಬಿ.ಎಸ್. ಯಡಿಯೂರಪ್ಪ ಮುಗುಳ್ನಗೆ ಬೀರಿದರು.

ಪ್ರಧಾನಿ ಮೋದಿ ರಾಜ್ಯದ ಜನರ ನಾಡಿಮಿಡಿತ ಅರಿತಿದ್ದಾರೆ. ಅಭಿವೃದ್ಧಿಯ ವೇಗ ಕಾಯ್ದುಕೊಳ್ಳಲು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

ಬಲ ತುಂಬಿದ ವರಿಷ್ಠರು

ಮೋದಿ ವಿಶ್ವಮೆಚ್ಚಿದ ನಾಯಕರಾಗಿದ್ದು, ಅವರ ನೇತೃತ್ವದಲ್ಲಿ ಜನರ ಬಳಿಗೆ ಹೋಗಿದ್ದರಲ್ಲಿ ತಪ್ಪೇನಿದೆ? ರಾಜ್ಯ ನಾಯಕರನ್ನು ಯಾರೊಬ್ಬರೂ ಕಡೆಗಣಿಸಿಲ್ಲ. ನಾನು, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಎಲ್ಲ ರಾಜ್ಯ ನಾಯಕರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇವೆ. ರಾಜ್ಯ ನಾಯಕರ ಪ್ರವಾಸ, ಕಾರ್ಯಕರ್ತರ ಪರಿಶ್ರಮಕ್ಕೆ ವರಿಷ್ಠರು ಉತ್ತೇಜಿಸಿದ್ದಾರೆ. ಅಷ್ಟೇ ಅಲ್ಲ, ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ ರಾಜ್ಯದ ತುಂಬಾ ಓಡಾಡಿ ನಮಗೆ ಬಲ ಕೊಟ್ಟಿದಾರೆ ಎಂದು ಯಡಿಯೂರಪ್ಪ ಸಮರ್ಥಿಸಿಕೊಂಡರು.

ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

Latest Posts

ಲೈಫ್‌ಸ್ಟೈಲ್