ಕಣ್ಣೀರಿಡುತ್ತಿರುವ ಪೊಲೀಸ್ ಸಿಬ್ಬಂದಿ: ಟ್ವಿಟರ್​ ಮೂಲಕ ಸಿಎಂ, ಕಮಿಷನರ್​ಗೆ ದೂರು

140520 Kukanuru Corona Police Security
Published on

ಬೆಂಗಳೂರು: ವಾರದ ರಜೆ, ಕರೊನಾ ಹಿನ್ನೆಲೆಯಲ್ಲಿ ನೀಡುತ್ತಿರುವ ದೀರ್ಘಕಾಲದ ರಜೆಯನ್ನು ನೀಡುತ್ತಿಲ್ಲ ಎಂದು ಬೊಮ್ಮನಹಳ್ಳಿ ಠಾಣೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕೆಳಹಂತದ ಸಿಬ್ಬಂದಿ ಆರೋಪಿಸಿದ್ದಾರೆ.

ಟ್ವಿಟರ್​ನಲ್ಲಿ ಬೊಮ್ಮನಹಳ್ಳಿ ಪೊಲೀಸ್ ಸ್ಟಾಫ್ ಎಂಬ ಖಾತೆ ತೆರೆದು ನೋವು ಹಂಚಿಕೊಂಡಿದ್ದಾರೆ. ಠಾಣೆಯನ್ನು ಇನ್​ಸ್ಪೆಕ್ಟರ್ ನಿಯಂತ್ರಣ ಮಾಡುತ್ತಿಲ್ಲ. ಬದಲಿಗೆ ಎಸ್​ಐ ಮತ್ತು ರೈಟರ್ ಕಂಟ್ರೋಲ್ ಮಾಡುತ್ತಿದ್ದಾರೆ. ಸರಿಯಾಗಿ ವಾರದ ರಜೆ ನೀಡುತ್ತಿಲ್ಲ. ಶೇ.33 ಸಿಬ್ಬಂದಿಗೆ ದೀರ್ಘಕಾಲದ ರಜೆ ನೀಡುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಆದರೆ, ಇಲ್ಲಿಯವರೆಗೂ ಯಾರಿಗೂ ರಜೆ ಮಂಜೂರು ಮಾಡಿಲ್ಲ ಎಂದು ದೂರಿದ್ದಾರೆ.

5 ವರ್ಷಗಳಿಂದ ಒಬ್ಬರೇ ರೈಟರ್ ಸೇವೆಯಲ್ಲಿದ್ದಾರೆ. 2 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಹುದ್ದೆ ನಿಭಾಯಿಸಿದವರನ್ನು ಬದಲಾಯಿಸಬೇಕೆಂದು ಭಾಸ್ಕರ್ ರಾವ್ ನಿರ್ದೇಶನ ನೀಡಿದ್ದರು. ಈ ಆದೇಶವೂ ಪಾಲನೆ ಆಗಿಲ್ಲ ಎಂದು ಟ್ವಿಟರ್ ಮೂಲಕವೇ ಸಿಎಂ, ಗೃಹ ಸಚಿವ, ಡಿಜಿಪಿ, ಕಮಿಷನರ್ ಹಾಗೂ ಆಗ್ನೇಯ ಡಿಸಿಪಿಗೆ ದೂರು ನೀಡಿದ್ದಾರೆ. ಇದನ್ನು ಗಮನಿಸಿರುವ ಪೊಲೀಸ್ ಆಯುಕ್ತರು ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net