

ಬೆಂಗಳೂರು: ಕಳೆದ ಮಾರ್ಚ್ 29ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕಾರಿನ ಒಳಗೆ ಸಜೀವ ದಹನವಾಗಿ ಹೋಗಿದ್ದ. ಈತನ ಮೃತದೇಹ ಗುರುತೇ ಸಿಗದಂತೆ ಸುಟ್ಟು ಕರಕಲಾಗಿ ಹೋಗಿತ್ತು. ಇದೀಗ ಪೊಲೀಸರು ಮೃತ ವ್ಯಕ್ತಿ ಯಾರೆಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಗುರುತು ಪತ್ತೆ ಮಾಡಲು ಸಹಕಾರಿಯಾಗಿರುವುದು ಆತನ ಒಳ ಉಡುಪು!
ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ವಿನೋದ್ ಎಂಬಾತನದ್ದು. ಕುಡಿದ ಮತ್ತಿನಲ್ಲಿ ಎಲ್ಲೆಂದರಲ್ಲಿ ಮಲಗುತ್ತಿದ್ದ. ಘಟನೆ ನಡೆದ ದಿನ ಸ್ಕ್ರಾಪ್ ಕಾರಿನಲ್ಲಿ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದಾನೆ. ನಿದ್ರೆಯ ಮಂಪರಿನಲ್ಲಿ ಸೊಳ್ಳೆ ಬತ್ತಿಯಿಂದ ಕಾರಿಗೆ ಬೆಂಕಿ ತಗುಲಿದ್ದು ಗೊತ್ತೇ ಆಗಿಲ್ಲ. ವಿನೋದ್ ಕೌಟುಂಬಿಕ ಕಾರಣದಿಂದ ಪತ್ನಿಯಿಂದ ದೂರವಾಗಿದ್ದ. ಬಳಿಕ ದೊಡ್ಡಬೊಮ್ಮಸಂದ್ರದಲ್ಲಿ ತಾಯಿಯೊಂದಿಗೆ ವಾಸವಾಗಿದ್ದ.
ವಿನೋದ್ ಕುಡಿತಕ್ಕೆ ದಾಸನಾಗಿ, ಪ್ರತಿದಿನ ಮನೆಗೆ ಬರುತ್ತಿರಲಿಲ್ಲ. ಅಂದು ಕೂಡ ಮದ್ಯದ ನಶೆಯಲ್ಲಿ ದೇವಿನಗರ ಬಳಿಯ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮಲಗಿದ್ದ. ಈ ವೇಳೆ ಏಕಾಏಕಿ ಸೊಳ್ಳೆ ಬತ್ತಿಯಿಂದ ಬೆಂಕಿ ತಗುಲಿ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಘಟನೆಯಲ್ಲಿ ಸಜೀವ ದಹನವಾಗಿದ್ದ ವ್ಯಕ್ತಿ ಯಾರೆಂದು ಆರಂಭದಲ್ಲಿ ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಪೊಲೀಸರು ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸಿ ತನಿಖೆಗೆ ಇಳಿದಿದ್ದರು. ಇದೀಗ ಸತತ ಪ್ರಯತ್ನ ಬಳಿಕ ಮೃತ ವ್ಯಕ್ತಿ ಧರಿಸಿದ್ದ ಒಳ ಉಡುಪನಿಂದ ಆತ ಯಾರೆಂದು ಎಂಬುದನ್ನು ಪತ್ತೆ ಮಾಡಿದ್ದಾರೆ. ಮೃತ ವಿನೋದ್ನ ಅರ್ಧ ಸುಟ್ಟ ಒಳ ಉಡುಪನ್ನು ಆತನ ತಾಯಿ ಮತ್ತು ಸಹೋದರಿ ಗುರುತಿಸಿದ್ದಾರೆ. ಇದರಿಂದ ಸುಟ್ಟು ಕರಕಲಾಗಿ ಹೋದ ವ್ಯಕ್ತಿ ಯಾರೆಂದು ತಿಳಿಯಲು ಪೊಲೀಸರಿಗೆ ಸಹಾಯವಾಗಿದೆ.