

ಬೆಳಗಾವಿ: ಕರೊನಾ ಎನ್ನುವುದು ಈಗ ದಿನದ ಇಪ್ಪತ್ನಾಲ್ಕು ಗಂಟೆಯೂ ನಾಗರಿಕ ಕರ್ತವ್ಯವನ್ನು ನಿಭಾಯಿಸುವ ಪೊಲೀಸರಿಗೂ ಆತಂಕ ತಂದಿದೆ.
ಪುತ್ರಿಯ ಮೇಲಿನ ವ್ಯಾಮೋಹವೇ ಈಗ ಪೊಲೀಸ್ ಅಧಿಕಾರಿಯೊಬ್ಬರ ಪಾಲಿಗೆ ದುಬಾರಿಯಾಗಿದ್ದು, ಅದರೊಂದಿಗೆ ಅವರ ಜತೆ ಸಂಪರ್ಕಕ್ಕೆ ಬಂದಿದ್ದ ಸಹೋದ್ಯೋಗಿಗಳಿಗೂ ಕಂಟಕವಾಗಿ ಪರಿಣಮಿಸಿದೆ. ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸೋಂಕಿತ ಪುತ್ರಿಯ ಸಂಪರ್ಕದಲ್ಲಿ ಇದ್ದುದೇ ಇಷ್ಟೆಲ್ಲ ಅವಘಡಕ್ಕೆ ಕಾರಣವಾಗಿದೆ.
ಹಿರೇಬಾಗೇವಾಡಿ ಗ್ರಾಮದಲ್ಲಿ ಎರಡನೇ ಸಂಪರ್ಕ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯ ಮಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಇಂದು ಆಕೆಯ ಕರೊನಾ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ಆ ಪೊಲೀಸ್ ಅಧಿಕಾರಿಯ ಸಹೋದ್ಯೋಗಿಗಳಿಗೆ ಆತಂಕ ಆರಂಭವಾಗಿದೆ. ಕ್ವಾರಂಟೈನ್‌ನಲ್ಲಿದ್ದ ಪುತ್ರಿಯನ್ನು ಆ ಅಧಿಕಾರಿ ಸಾಕಷ್ಟು ಸಲ ಭೇಟಿಯಾಗಿದ್ದರು. ಮಗಳು ಕಣ್ಣೀರಿಡುತ್ತಿದ್ದ ಕಾರಣ ಆ ಕ್ಷಣಕ್ಕೆ ಮೈಮರೆತು ಮಗಳನ್ನು ಸಂತೈಸಿದ್ದರು.
ಮಗಳಿಗೆ ಕರೊನಾ ಸೋಂಕು ಪಾಸಿಟಿವ್ ಬಂದಿರುವುದರಿಂದ ಕೆಎಸ್‌ಆರ್‌ಪಿಯ ಆ ಅಧಿಕಾರಿಯೂ ಸೇರಿದಂತೆ 45ಕ್ಕೂ ಹೆಚ್ಚು ಪೋಲಿಸರನ್ನು ಕ್ವಾರಂಟೈನ್ ಮಾಡಲು ಕ್ರಮ ವಹಿಸಲಾಗುತ್ತಿದೆ. ಕಳೆದ ಹಲವು ದಿನಗಳಲ್ಲಿ ಈ ಪೊಲೀಸರ ಜತೆ ಒಡನಾಡಿರುವ ಸಿವಿಲ್ ಪೋಲಿಸರಿಗೂ ಆತಂಕ ಆರಂಭವಾಗಿದೆ.