

ಹಾವೇರಿ: ಸಮನ್ಸ್ ಜಾರಿ ಮಾಡಲು ಹೋದ ಪೊಲೀಸ್ ಕಾನ್ಸ್ಟೆಬಲ್ ಮಾರ್ಗಮಧ್ಯೆಯೇ ಸಾವಿಗೀಡಾದ ಪ್ರಸಂಗವೊಂದು ನಡೆದಿದೆ. ಹಾವೇರಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿದ್ದ ಚನ್ನಪ್ಪ ಸಂಶೀ (56) ಸಾವಿಗೀಡಾದವರು. ಕರ್ತವ್ಯನಿರತರಾಗಿದ್ದ ಇವರು ಸಮನ್ಸ್ ಜಾರಿ ಮಾಡಲು ಹೋಗಿದ್ದರು. ಆದರೆ ಇವರು ಮಾರ್ಗಮಧ್ಯೆಯೇ ಸಾವಿಗೀಡಾಗಿದ್ದಾರೆ.
ಬೈಕ್ನಲ್ಲಿ ಸಾಗುತ್ತಿದ್ದ ಇವರಿಗೆ ಶಿಗ್ಗಾಂವಿ ತಾಲೂಕಿನ ಹನಮರಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಂಭೀರ ಗಾಯಗೊಂಡ ಚನ್ನಪ್ಪ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಪಿಎಸ್ಐ ಸಂಪತ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.