ಮಕ್ಕಳಿಬ್ಬರ ಶವ ನೀರಲ್ಲಿ ತೇಲಲಾರಂಭಿಸಿದ ಬಳಿಕವೇ ಈಜುಕೊಳದವರಿಗೆ ಗೊತ್ತಾಗಿದ್ದು!; ತರಬೇತುದಾರನ ಬಂಧನ

Swim
Published on

ಬೆಂಗಳೂರು: ಸ್ವಿಮಿಂಗ್ ಪೂಲ್‌ನಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಪ್ರಕರಣ ಕೋಣನಕುಂಟೆ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ನಡೆದಿದ್ದು, ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ.

ಜರಗನಹಳ್ಳಿ ನಿವಾಸಿಗಳಾದ ಜಯಂತ್(13) ಮತ್ತು ಮೋಹನ್(13) ಮೃತಪಟ್ಟ ಬಾಲಕರು. ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಅನ್ನಪೂರ್ಣೇಶ್ವರಿ ಲೇಔಟ್‌ನ ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಯ ಈಜುಕೊಳದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಅಕಾಡೆಮಿಯ ಈಜು ತರಬೇತುದಾರ ಮೋಯಿನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಇಬ್ಬರು ಬಾಲಕರು ನಗರದ ಜರಗನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಇಬ್ಬರೂ ಶಾಲೆಗೆ ಹೋಗಿರಲಿಲ್ಲ. ಮಧ್ಯಾಹ್ನ 1.30ರ ಸುಮಾರಿಗೆ ಈಜಲು ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಯ ಈಜುಕೊಳಕ್ಕೆ ಬಂದಿದ್ದರು. ಈ ವೇಳೆ ಈಜುಕೊಳಕ್ಕೆ ಇಳಿದಿರುವ ಇಬ್ಬರು ಆರಂಭದಲ್ಲಿ ಆಳ ಕಡಿಮೆ ಇರುವ ಕಡೆ ಈಜಾಡಿದ್ದಾರೆ. ಬಳಿಕ ಹೆಚ್ಚು ಆಳವಿರುವ ಕಡೆಗೆ ಈಜಿಕೊಂಡು ಹೋಗಿದ್ದು, ಸರಿಯಾಗಿ ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ.

ಈ ವೇಳೆ ಈಜುಕೊಳದಲ್ಲಿ ಹೆಚ್ಚಿನ ಜನರು ಇರಲಿಲ್ಲ. ಈ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿದರೂ ಯಾರೂ ಗಮನಿಸಿಲ್ಲ. ಕೆಲಹೊತ್ತಿನ ಬಳಿಕ ಈಜುಕೊಳದಲ್ಲಿ ಬಾಲಕರ ದೇಹಗಳು ನೀರಿನ ಮೇಲ್ಭಾಗಕ್ಕೆ ಬಂದಾಗ ಸ್ಥಳದಲ್ಲಿದ್ದ ಕೆಲವರು ಎಳೆದು ಮೇಲಕ್ಕೆ ತಂದಿದ್ದಾರೆ. ಈ ವೇಳೆ ಇಬ್ಬರು ಮೃತಪಟ್ಟಿರುವುದು ಗೊತ್ತಾಗಿದೆ.

ಬಾಲಕ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಠಾಣೆ ಪೊಲೀಸರು, ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನಿರ್ಲಕ್ಷೃದ ಹಿನ್ನೆಲೆಯಲ್ಲಿ ಈಜು ತರಬೇತುದಾರ ಮೋಯಿನ್‌ನನ್ನು ಬಂಧಿಸಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net