ಲಾಡ್ಜ್​ನಲ್ಲಿ ನೇತಾಡುತ್ತಿತ್ತು ಬಿಎಂಟಿಸಿ ಚಾಲಕನ ಶವ; ಡೋರ್ ಲಾಕ್ ಮಾಡಿ ಹೋದ ಯುವತಿ ಯಾರು?

Puttegowda
Published on

ಬೆಂಗಳೂರು: ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ ಬಿಎಂಟಿಸಿ ಚಾಲಕನೊಬ್ಬ ಲಾಡ್ಜ್​ವೊಂದರಲ್ಲಿ ಸಾವಿಗೀಡಾಗಿದ್ದಾನೆ. ಆತನ ಶವ ನೇತಾಡುವ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದಕ್ಕೂ ಯವತಿಯೊಬ್ಬಳ ಆ ರೂಮ್​ನ ಡೋರ್ ಲಾಕ್ ಮಾಡಿ ಹೊರಹೋಗಿರುವುದು ಕೂಡ ಕಂಡುಬಂದಿದೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಚನ್ನಪಟ್ಟಣ ಮೂಲಕ ಪುಟ್ಟೇಗೌಡ (28) ಸಾವಿಗೀಡಾದ ಬಿಎಂಟಿಸಿ ಚಾಲಕ. ಕಳೆದ ಆರು ತಿಂಗಳಿನಿಂದ ಬಿಎಂಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಇಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಊರಿನಿಂದ ಹೊರಟಿದ್ದ. ಆದರೆ ಮಧ್ಯಾಹ್ನ 12ರ ಸುಮಾರಿಗೆ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.

ಕೆಂಗೇರಿಯ ಖಾಸಗಿ ಲಾಡ್ಜ್​​ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಚಾಲಕನ ಶವ ಪತ್ತೆಯಾಗಿದೆ. ಆತನ ಹಣೆ ಮೇಲೆ ಗಾಯವಾಗಿದೆ ಎಂದಿರುವ ಸಂಬಂಧಿಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಲಾಡ್ಜ್​ನ ಅದೇ ರೂಮ್​ನಿಂದ ಯುವತಿಯೊಬ್ಬಳು ಡೋರ್ ಲಾಕ್ ಮಾಡಿ ಹೋಗಿರುವುದು ಕುತೂಹಲ ಕೆರಳಿಸಿದೆ.

ಪುಟ್ಟೇಗೌಡ ಯುವತಿ ಜೊತೆ ಲಾಡ್ಜ್​ಗೆ ಬಂದಿದ್ದ ಎನ್ನಲಾಗಿದೆ. ಬಾಕಿ ಹಣ ಕೇಳಲು ಲಾಡ್ಜ್​ ಸಿಬ್ಬಂದಿ ರೂಮ್ ಬಳಿಗೆ ತೆರಳಿದಾಗ ಆತ ಸಾವಿಗೀಡಾಗಿದ್ದು ಗೊತ್ತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಯುವತಿ ಹಾಗೂ ಘಟನೆಯ ಕುರಿತಂತೆ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net