4 ಕಿ.ಮೀ ಸಿನಿಮೀಯ ರೀತಿ ಚೇಸಿಂಗ್​! ಕಂಟೈನರ್​ ಒಳಗಿದ್ದ ವಸ್ತು ಕಂಡು ಪೊಲೀಸರೇ ಶಾಕ್​

police arrested in cinematic style
Published on

ತಮಿಳುನಾಡು: ಇಂದು ಐಷರಾಮಿ ಜೀವನ ನಡೆಸಲು ಬೇಕಿರುವುದು ಹಣ ಬಿಟ್ಟರೆ ಬೇರೇನೂ ಅಲ್ಲ. ಹಣಕ್ಕಾಗಿ ಹೆಣವೇ ಬಾಯಿ ಬಿಟ್ಟಿತು ಎಂಬ ಮಾತಿನಂತೆ ದುಡ್ಡಿಲ್ಲದ ಜೀವನ ಜೀವನವೇ ಅಲ್ಲ ಎಂದು ಅನೇಕರು ಭಾವಿಸಿದ್ದಾರೆ. ಅದರಂತೆಯೇ ಸಂಪಾದನೆ ಹಿಂದೆಯೇ ಓಡುತ್ತಿದ್ದಾರೆ. ಈ ಪೈಕಿ ಕೆಲವರು ಮಾತ್ರ ಸುಲಭವಾಗಿ ಹಣ ಗಳಿಸಲು ಅಡ್ಡದಾರಿ ಹುಡುಕುತ್ತಾರೆ. ಇದು ಯಾರ ಕಣ್ಣಿಗೂ ಬೀಳದಂತೆ ಮಾಡುವಲ್ಲಿ ಅಪರೂಪಕ್ಕೆ ಯಶಸ್ವಿಯೂ ಆಗ್ತಾರೆ. ಲಕ್ಸುರಿ ಲೈಫ್​ ಆನಂದಿಸುವ ಸಲುವಾಗಿ ಇಂತಹ ಮಾರ್ಗದಲ್ಲಿ ಚಲಿಸುವ ಅದೆಷ್ಟೋ ಮಂದಿ ಅಂತಿಮವಾಗಿ ಸೇರಿದ್ದು ಜೈಲು ಇಲ್ಲವೇ ನೇರ ಮಸಣಕ್ಕೆ. ಸದ್ಯ ಇದೇ ರೀತಿಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದ್ದು, ಪೊಲೀಸರು ದರೋಡೆಕೋರರನ್ನು (Cinematic Chasing Robbery) ಸುಮಾರು 4 ಕಿಮೀ ಸಿನಿಮೀಯ ರೀತಿ ಬೆನ್ನಟ್ಟಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಪಾವಧಿಯಲ್ಲಿ ಲಕ್ಸುರಿ ಜೀವನ ಆನಂದಿಸಲು ಅಡ್ಡದಾರಿ ಹಿಡಿಯುವ ಇಂತಹ ಕಳ್ಳರು ಲೂಟಿ (Theft), ಡ್ರಗ್ಸ್​ ಸೇರಿದಂತೆ ದೊಡ್ಡ ದಂಧೆಗಳನ್ನೇ ನಡೆಸುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ಎಟಿಎಂನಿಂದ ಹಣ ದೋಚುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಆಗಾಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಇದೇ ಯೋಚನೆಯಲ್ಲಿ ಇಲ್ಲೊಂದು ಖದೀಮರ ಗ್ಯಾಂಗ್​, ಎಟಿಎಂ ಹಣವನ್ನು ಕದ್ದು ಅದನ್ನು ಪೊಲೀಸರ ಕಣ್ಣಿನಿಂದ ತಪ್ಪಿಸಲು ಮಾಡಿದ್ದ ಮಾಸ್ಟರ್​ಪ್ಲ್ಯಾನ್​ ಥೇಟ್​ ಸಿನಿಮೀಯ ಶೈಲಿಯಂತಿದೆ. ಅಂತಿಮವಾಗಿ ಆರೋಪಿಗಳನ್ನು ಬಂಧಿಸಿ, ಕೋರ್ಟ್​ಗೆ ಒಪ್ಪಿಸಿರುವ ಪೊಲೀಸರು, ಕಳ್ಳರನ್ನು ಸೆರೆಹಿಡಿದಿದ್ದೇ ರೋಚಕ.

ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ

ಕೇರಳದ ತ್ರಿಶೂರ್ ಜಿಲ್ಲೆಯ ಮೂರು ವಿವಿಧ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಎಟಿಎಂಗಳಲ್ಲಿ ಹಣ ಲೂಟಿ ಮಾಡಲಾಗಿತ್ತು. ಶುಕ್ರವಾರ (ಸೆ.27) ರಾತ್ರಿ ಎಟಿಎಂ ಯಂತ್ರದಲ್ಲಿ ಇಡಲಾಗಿದ್ದ ಹಣದ ಬಾಕ್ಸ್​ ಅನ್ನು ಪ್ರತ್ಯೇಕವಾಗಿ ಗ್ಯಾಸ್‌ ಕಟ್ಟರ್‌ ಬಳಸಿ 65 ಲಕ್ಷ ರೂ. ಹಣ ದೋಚಿದ್ದ ಕಳ್ಳರು, ಸಿಸಿಟಿವಿ ಕ್ಯಾಮೆರಾಗಳನ್ನು ಸ್ಪ್ರೇ ಪೇಂಟ್‌ನಿಂದ ಮುಚ್ಚಿಹಾಕಿದ್ದಾರೆ. ಇಂದು ಎಟಿಎಂನಲ್ಲಿ ಕಳ್ಳತನವಾಗಿರುವ ವಿಷಯ ತಿಳಿದು ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸ್ ಫೋರೆನ್ಸಿಕ್ ತಂಡ ಮತ್ತು ಶ್ವಾನ ದಳ ಸ್ಥಳಕ್ಕೆ ಆಗಮಿಸಿ, ದರೋಡೆಕೋರರ ಮುಂದಿನ ಹೆಜ್ಜೆಯನ್ನು ಪತ್ತೆಹಚ್ಚಿದರು.

ಸಿಕ್ಕಿಬಿದ್ದದ್ದು ಹೇಗೆ?

ಕದ್ದ ನಗದನ್ನು ಕಂಟೈನರ್‌ನೊಳಗೆ ಕಾರನ್ನು ಇರಿಸಿ, ಅದರೊಳಗೆ ಮುಚ್ಚಿಟ್ಟಿದ್ದ ದುಷ್ಕರ್ಮಿಗಳು, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದೇ ವೇಳೆಗೆ ಸರಿಯಾಗಿ ತಮಿಳುನಾಡು ಪೊಲೀಸರು ಅವರನ್ನು ಬೆನ್ನಟ್ಟಿದ್ದು, ಸುಮಾರು ನಾಲ್ಕು ಕಿಲೋಮೀಟರ್‌ಗೂ ಸಿನಿಮೀಯ ರೀತಿ ಚೇಸ್​ ಮಾಡಿ ಕಡೆಗೆ ತಮಿಳುನಾಡಿನ ನಾಮಕ್ಕಲ್ ಬಳಿ ಅಡ್ಡ ಹಾಕಿದ್ದಾರೆ. ಕಂಟೈನರ್ ಟ್ರಕ್ ಅನ್ನು ವಶಪಡಿಸಿಕೊಂಡ ಖಾಕಿ ಪಡೆ, ತಮ್ಮ ಮೇಲೆಯೇ ದಾಳಿ ಮಾಡಿ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಕಳ್ಳರ ಪೈಕಿ ಓರ್ವನನ್ನು ಗುಂಡಿಕ್ಕಿ ಕೊಂದಿದೆ. ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, ಮತ್ತೊಬ್ಬನಿಗೆ ಬುಲೆಟ್ ತಗುಲಿ ಗಾಯಗಳಾಗಿವೆ.

ಈ ಕಾರ್ಯಾಚರಣೆಯಲ್ಲಿ ತಮಿಳುನಾಡಿನ ಇಬ್ಬರು ಪೊಲೀಸ್ ಅಧಿಕಾರಿಗಳು ಕೂಡ ಗಾಯಗೊಂಡಿದ್ದಾರೆ. ದರೋಡೆಯಲ್ಲಿ ತೊಡಗಿದ್ದ ಗ್ಯಾಂಗ್ ಸದಸ್ಯರ ಬಂಧನದ ವೇಳೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಕುಮಾರಪಾಲಂ ಪೊಲೀಸ್ ಇನ್ಸ್‌ಪೆಕ್ಟರ್ ತವಮಣಿ ಮತ್ತು ಪಲ್ಲಿಪಾಳ್ಯಂ ಪೊಲೀಸ್ ಸಹಾಯಕ ನಿರೀಕ್ಷಕ ರಂಜಿತ್ ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳು ತಮ್ಮ ವಶದಲ್ಲಿದ್ದಾರೆ ಎಂದು ನಾಮಕಲ್ ಪೊಲೀಸ್ ಉನ್ನತ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಕಂಟೈನರ್​ ಒಳಗಿದ್ದ ಕಾರಿನಲ್ಲಿ ಸಿಕ್ಕಿದ್ದೇನು?

ಕಂಟೈನರ್‌ನಲ್ಲಿ ಬಚ್ಚಿಟ್ಟಿದ್ದ ಕಾರನ್ನು ಪರಿಶೀಲಿಸಿದಾಗ ನೋಟುಗಳ ಬಂಡಲ್‌ಗಳು ಪತ್ತೆಯಾಗಿವೆ. ತಮಿಳುನಾಡಿನಲ್ಲಿ ಬಂಧಿತ ಆರೋಪಿಗಳ ವಿರುದ್ಧ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ತ್ರಿಶೂರ್‌ಗೆ ಸ್ಥಳಾಂತರಿಸಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳತನದಲ್ಲಿ ಭಾಗಿಯಾಗಿದ್ದವರನ್ನು ಸೆರೆಹಿಡಿದ ಪೊಲೀಸರಿಗೆ ಉನ್ನತ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net