ಮದುವೆಯಾಗಲು ನಿರಾಕರಿಸಿದ್ದಕ್ಕೆ ಕತ್ತು ಕುಯ್ದು ಕೊಲೆ ಮಾಡಿದ ಕಿರಾತಕ!

murder
Published on

ಯಲಹಂಕ: ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದ ಬಳಿಯ ಖಾಸಗಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿ ಯುವತಿಯ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದ್ದು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಓದಿ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ವಿದ್ಯಾರ್ಥಿನಿ ರಾಶಿ (19) ಕೊಲೆಯಾಗಿ ಹೋಗಿದ್ದಾಳೆ. ಈಗ ಕೊಲೆ ಹಿಂದಿನ ರಹಸ್ಯವನ್ನು ಭೇದಿಸಿರುವ ಪೊಲೀಸರು, ಇದು ಪ್ರೀತಿಗಾಗಿ ನಡೆದಿರುವ ಹತ್ಯೆ ಎಂದು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಚಾಕುವಿನಿಂದ ಕತ್ತು ಕುಯ್ದು ವಿದ್ಯಾರ್ಥಿನಿಯ ಭೀಕರ ಕೊಲೆ!
ಪ್ರೀತಿ ವಿಚಾರಕ್ಕೆ ಯುವತಿ ಕೊಲೆಯಾಗಿದ್ದು ಮದುವೆಯಾಗಿದ್ದ ವ್ಯಕ್ತಿಯಿಂದ ಯುವತಿ ಸಾವಿಗೀಡಾಗಿದ್ದಾಳೆ. ನೆನ್ನೆ ಸಂಜೆ ಮಧುಚಂದ್ರ ಎನ್ನುವಾತ ಕೊಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಇವರಿಬ್ಬರೂ ಕಳೆ‌ದ ಹಲವು ತಿಂಗಳುಗಳಿಂದ ಪ್ರೀತಿಸುತ್ತಿದ್ದು ಮದುವೆಯಾಗುವಂತೆ ಮಧುಚಂದ್ರ ದುಂಬಾಲು ಬಿದ್ದಿದ್ದ.

ಕಾಲೇಜು ಇಲ್ಲದ ವೇಳೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದ ಮೃತ ಯುವತಿ ರಾಶಿಗೆ ಕೃಷಿ ಲೋಡಿಂಗ್​ಗೆ ಟೆಂಪೋ ಚಾಲಕನಾಗಿ ಬರುತ್ತಿದ್ದ ಆರೋಪಿ ಮಧುಚಂದ್ರ ಪರಿಚಯವಾಗಿದ್ದಾನೆ. ಈ ವೇಳೆ‌ ಸ್ನೇಹ ಬೆಳೆದು ಇಬ್ಬರ ಮಧ್ಯೆ ಪ್ರೀತಿಯಾಗಿದ್ದು ಮದುವೆಯಾಗುವಂತೆ ಆತ ದುಂಬಾಲು ಬಿದ್ದಿದ್ದಾನೆ. ಈ ಮೊದಲೇ ಮಧುಚಂದ್ರ ಮದುವೆಯಾಗಿದ್ದ ಕಾರಣ ಮೃತ ಯುವತಿ ಮದುವೆಗೆ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಮಧುಚಂದ್ರ ಈಕೆಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ನೆನ್ನೆ ಸಂಜೆ‌ ಹಸು ಮೇಯಿಸಲು ಹೋಗಿದ್ದ ವೇಳೆ ಮಧುಚಂದ್ರ ಬಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ರಾಜಾನುಕುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net