

ಯಲಹಂಕ: ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದ ಬಳಿಯ ಖಾಸಗಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿ ಯುವತಿಯ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದ್ದು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಓದಿ ಭವಿಷ್ಯ ಕಟ್ಟಿಕೊಳ್ಳಬೇಕಿದ್ದ ವಿದ್ಯಾರ್ಥಿನಿ ರಾಶಿ (19) ಕೊಲೆಯಾಗಿ ಹೋಗಿದ್ದಾಳೆ.
ನಿರ್ಜನ ಪ್ರದೇಶದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ರಾಶಿಯ ಮೃತದೇಹವನ್ನು ಗಾಬರಿಗೊಳಗಾದ ಸ್ಥಳಿಯರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ನಿನ್ನೆ ಮಧ್ಯಾಹ್ನವೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಬಗ್ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡುತ್ತಾ ಹೇಳಿಕೆ ನೀಡಿದ್ದು 'ಕೊಲೆಯಾದ ವಿದ್ಯಾರ್ಥಿನಿ ರಾಶಿ ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನೆನ್ನೆ ಸಂಜೆ ಹಸುವನ್ನ ಹೊಡೆದುಕೊಂಡು ಹೋಗಲು ಬಂದಾಗ ನಿರ್ಜನ ಪ್ರದೇಶದಲ್ಲಿ ಚಾಕು ಹಾಕಲಾಗಿದೆ. ಈ ಹಿಂದೆಯೂ ರಾಶಿ ಮನೆಯ ಬಳಿ ಬಂದು ಯುವಕನೊಬ್ಬ ಪ್ರೀತಿ ವಿಚಾರದಲ್ಲಿ ಗಲಾಟೆ ಮಾಡಿದ್ದನಂತೆ. ಈ ಬಗ್ಗೆ ಪೊಲೀಸರಿಂದ ಸಂಪೂರ್ಣ ತನಿಖೆ ನಡೆಸಲಾಗುತ್ತೆ' ಎಂದಿದ್ದಾರೆ.