ಇಂದು ಕುವೆಂಪು ಜನ್ಮದಿನ: ನೆನಪಿನಂಗಳದಲ್ಲಿ ರಸಋಷಿ

ವಿಜಯವಾಣಿ (14)
Published on

| ಡಾ. ಸಿ.ಪಿ. ಕೃಷ್ಣಕುಮಾರ್

ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ...

ಕುವೆಂಪು ನನಗೆ ತರಗತಿಯಲ್ಲಿ ಪಾಠ ಹೇಳಿದ ಗುರುಗಳಲ್ಲ. ಅವರು ನನ್ನ ಗುರುಗಳ ಗುರು. ನಾನು ಬಿ.ಎ. ಓದಲು ಮಹಾರಾಜ ಕಾಲೇಜಿಗೆ ಬರುವ ವೇಳೆಗೆ ಅವರು ಕುಲಪತಿಗಳಾಗಿದ್ದರು. ಹಾಗಾಗಿ, ತರಗತಿಯಲ್ಲಿ ಅವರ ಪಾಠ ಕೇಳುವ ಅದೃಷ್ಟ ನನಗೆ ಸಿಗಲಿಲ್ಲ. ಆದರೂ, ಪರೋಕ್ಷವಾಗಿ ಅವರೇ ನನ್ನ ಗುರುಗಳು. ಏಕೆಂದರೆ ದಶಕಗಳ ಕಾಲ ಅವರ ಮನೆಗೆ ಹೋಗಿ ಅವರೊಂದಿಗೆ ಮಾತನಾಡಿ, ಅವರ ವಿಚಾರಗಳನ್ನು ತಿಳಿದಿದ್ದೇನೆ. ಕೆಲವನ್ನು ದಾಖಲಿಸಿದ್ದೇನೆ. ಹಾಗಾಗಿ, ನನ್ನ ಮೇಲೆ ಅವರ ಪ್ರಭಾವ ಹೆಚ್ಚೇ ಇದೆ. ನಾಡಗೀತೆಯಾಗಿರುವ ‘ಜಯ ಭಾರತ ಜನನಿಯ ತನುಜಾತೆ’ ಕವಿತೆಗೆ ಈಗ ನೂರು ವರ್ಷದ ಸಂಭ್ರಮ. ಇಲ್ಲಿ ಅಡಕವಾಗಿರುವ ‘ಸರ್ವಜನಾಂಗದ ಶಾಂತಿಯ ತೋಟ’ ಸಂದೇಶ ಇಂದು ಇಡೀ ವಿಶ್ವಕ್ಕೆ ಬೇಕಾಗಿದೆ. ಜಗತ್ತು ಮೂರನೇ ಮಹಾಯುದ್ಧದ ಹೊಸ್ತಿಲ್ಲಲ್ಲಿದೆ. ಇಂತಹ ಸಮಯದಲ್ಲಿ ಇದು ಸಂಜೀವಿನಿಯಾಗಿದೆ. ವಿಶ್ವಮಾನವ ಸಂದೇಶ ಈಗಲೇ ಅನುಷ್ಠಾನಕ್ಕೆ ಬರಬೇಕು ಎಂದೇನಿಲ್ಲ. 500 ವರ್ಷದೊಳಗೆ ಅನುಷ್ಠಾನಕ್ಕೆ ಬಂದರೂ ಸಾಕು ಎನ್ನುತ್ತಿದ್ದರು.

ಸಾವು ಭೂಮಿ ಮೇಲಿನ ಮಿಥ್ಯೆ: ಸಾಮಾನ್ಯವಾಗಿ ದಾರ್ಶನಿಕರು, ಸಂತರು ‘ಬದುಕು ಎನ್ನುವುದೇ ಸುಳ್ಳು, ಅಂತಿಮವಾಗಿ ಸಾವೇ ಸತ್ಯ’ ಎನ್ನುತ್ತಾರೆ. ಆದರೆ, ಕುವೆಂಪು ಅವರು ಸಾವನ್ನು ಮಿಥ್ಯೆ ಎನ್ನುತ್ತಿದ್ದರು. ಬದುಕೇ ಅವರ ಪಾಲಿಗೆ ಸತ್ಯವಾಗಿತ್ತು. ಜೀವನ ಎನ್ನುವುದು ಒಂದು ಹಬ್ಬ, ರಥೋತ್ಸವ ಇದ್ದ ಹಾಗೆ. ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎನ್ನುತ್ತಿದ್ದರು. ಅವರ ಪತ್ನಿ ನಿಧನರಾದಾಗಲೂ ‘ನಮ್ಮ ಮನೆಯವರು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ’ ಎಂದು ನಂಬಿದ್ದರು. ಈಗ ನಾವು ಕೂಡ ‘ಕುವೆಂಪು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾರೆ’ ಎಂದು ನಂಬಿದ್ದೇವೆ.

ವಿಶ್ವಮಾನವ ಸಂದೇಶಕ್ಕೆ ಹೆಚ್ಚು ಒತ್ತು

ಕುವೆಂಪು ಅವರು ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಮಾತಿನ ತಳಹದಿ ಮೇಲೆ ವಿಶ್ವಮಾನವ ಸಂದೇಶಕ್ಕೆ ಹೆಚ್ಚು ಒತ್ತು ನೀಡಿದ್ದರು. ಅವರ ‘ಅನಿಕೇತನ’ ಕವನದಲ್ಲಿ ಈ ಸಂದೇಶ ಅಡಕವಾಗಿದೆ. ಅವರ ಜೀವನದ ಉತ್ತರ ಭಾಗವೆಲ್ಲ ವಿಶ್ವಮಾನವ ಸಂದೇಶಕ್ಕೆ ಮೀಸಲಾಗಿತ್ತು. ‘ನನಗೆ ಕನ್ನಡ ಮತ್ತು ಅದರ ಉನ್ನತಿ ಮುಖ್ಯ ನಿಜ. ಆದರೆ, ಅದಕ್ಕಿಂತ ವಿಶ್ವಮಾನವ ಸಂದೇಶ ಮುಖ್ಯ’ ಎನ್ನುತ್ತಿದ್ದರು ಕುವೆಂಪು. ಕೊನೆಕೊನೆಯಲ್ಲಿ ಅವರನ್ನು ನೋಡಲು ಹೋದವರಿಗೆಲ್ಲ ವಿಶ್ವಮಾನವ ಸಂದೇಶದ ಪ್ರತಿಗಳನ್ನು ವ್ಯಾಪಕವಾಗಿ ಹಂಚುವಂತೆ ಹೇಳುತ್ತಿದ್ದರು. ಎಲ್ಲರೂ ವಿಶ್ವಮಾನವರಾದರೆ ಜಾತಿ, ಮತ, ಧರ್ಮ ಎಲ್ಲವನ್ನೂ ಮೀರಿ ಮುಂದೆ ಹೋಗಬಹುದು ಎನ್ನುತ್ತಿದ್ದರು. ಕಡೆ ಕಡೆಗೆ ಅವರು ಪ್ರಶಸ್ತಿಗಳನ್ನು ತಾತ್ಸಾರದಿಂದ ಕಾಣುತ್ತಿದ್ದರು.

‘ವಿಶ್ವಮಾನವ ಸಂದೇಶಕ್ಕೆ ನೆರವಾಗುವುದಾದರೆ ಪ್ರಶಸ್ತಿ ಸ್ವೀಕರಿಸುತ್ತೇನೆ’ ಎನ್ನುತ್ತಿದ್ದರು. ಅವರ ‘ಅನಿಕೇತನ’ ಕವಿತೆ ಒಬ್ಬ ದೊಡ್ಡ ವಿದ್ವಾಂಸರಿಗೆ ಅರ್ಥ ಆಗಿರಲಿಲ್ಲ. ಹಾಗಾಗಿ ಅವರು ‘ಮನೆಯನೆಂದೂ ಕಟ್ಟದಿರು ಎಂದರೇನು?’ ಎಂದು ಪ್ರಶ್ನಿಸಿ ಕುವೆಂಪು ಅವರಿಗೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಉತ್ತರ ನೀಡುವಂತೆ ಕುವೆಂಪು ನನಗೆ ಹೇಳಿದ್ದರು. ನಾನು ಉತ್ತರ ಬರೆದರೂ ಆ ಪಂಡಿತರಿಗೆ ಅರ್ಥವಾಗದೆ ಮತ್ತೊಂದು ಪತ್ರ ಬರೆದಿದ್ದರು. ಬಳಿಕ ಕುವೆಂಪು ಮತ್ತೆ ಯಾವುದೇ ಪತ್ರ ಬರೆಯದಂತೆ ಹೇಳುವ ಜತೆಗೆ ‘ಮೌಢ್ಯದಲ್ಲಿ ಎರಡು ವಿಧ. ಜ್ಞಾನಪೂರ್ವ ಮೌಢ್ಯ, ಜ್ಞಾನೋತ್ತರ ಮೌಢ್ಯ. ಅನಕ್ಷರಸ್ಥರಲ್ಲಿ ಜ್ಞಾನಪೂರ್ವ ಮೌಢ್ಯ ಕಂಡು ಬರುತ್ತದೆ. ಇದು ಅಷ್ಟು ಅಪಾಯಕಾರಿ ಅಲ್ಲ. ಪಂಡಿತರಲ್ಲಿ ಕಂಡು ಬರುವ ಜ್ಞಾನೋತ್ತರ ಮೌಢ್ಯ ಹೆಚ್ಚು ಅಪಾಯಕಾರಿ’ ಎಂದು ನನಗೆ ತಿಳಿಸಿದ್ದರು.

ಎಲ್ಲ ಭಾಷೆ ಮೇಲೂ ಗೌರವ ಇತ್ತು

ಕನ್ನಡ ಭಾಷೆ ಅಭಿವೃದ್ಧಿಯಾಗಬೇಕು ಎಂದು ಕುವೆಂಪು ಕನಸು ಕಾಣುತ್ತಿದ್ದರೂ ಅವರಿಗೆ ಇತರ ಭಾಷೆಗಳ ಮೇಲೆ ದ್ವೇಷ ಇರಲಿಲ್ಲ. ಆರಂಭದಲ್ಲಿ ಇಂಗ್ಲಿಷ್ ಕವಿತೆ ಬರೆಯುತ್ತಿದ್ದ ಅವರು ನಂತರ ಕನ್ನಡದ ಕಡೆಗೆ ತಿರುಗಿದರು. ಯಾವುದೇ ಭಾಷೆಯನ್ನು ದ್ವೇಷ ಮಾಡಬಾರದು. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಬೇಕು ಎನ್ನುತ್ತಿದ್ದರು. ಆದರೆ, ಕನ್ನಡದ ಪ್ರೇಮ ಉತ್ಕಟವಾಗಿತ್ತು. ‘ಎಲ್ಲ ಭಾಷೆಗಳನ್ನೂ ಕಲಿಯಬೇಕು. ಆದರೆ, ನಮ್ಮ ಅಭಿವ್ಯಕ್ತಿ ಮಾಧ್ಯಮ ಕನ್ನಡ ಆಗಬೇಕು’ ಎನ್ನುತ್ತಿದ್ದರು.

ಕುವೆಂಪು ಮೇಲೆ ಅನೇಕರ ಪ್ರಭಾವ

ಕೆಲವರು ತಮ್ಮ ಮೇಲೆ ಯಾರ ಪ್ರಭಾವವೂ ಆಗಲಿಲ್ಲ ಎಂದು ಹೇಳುತ್ತಾರೆ. ಆದರೆ, ಕುವೆಂಪು ಅವರು ‘ನನ್ನ ಮೇಲೆ ಅನೇಕರ ಪ್ರಭಾವ ಆಗಿದೆ. ಎಷ್ಟು ಜನರ ಪ್ರಭಾವ ಆಗಿದೆ ಎಂದು ತಿಳಿಸಬೇಕಾದರೆ ಒಂದು ಪುಸ್ತಕವನ್ನು ಬರೆಯಬೇಕು’ ಎನ್ನುತ್ತಿದ್ದರು. ಆದರೆ, ಯಾರ ಪ್ರಭಾವವೂ ಇಲ್ಲದೆ ‘ಕಾಲೋಸ್ಮಿ’ ಎಂಬ ಮಹಾಕಾದಂಬರಿ ಬರೆಯಬೇಕು ಎಂದು ಸಿದ್ಧತೆ ಮಾಡಿಕೊಂಡಿದ್ದರು. ಅದನ್ನು ಬರೆಯಲು ಆಗಲಿಲ್ಲ. ಬರೆದಿದ್ದರೆ ಅದು ಕೂಡ ಒಂದು ಅದ್ಭುತ ಕೃತಿಯಾಗುತ್ತಿತ್ತು. (ಲೇಖಕರು ಕನ್ನಡದ ಹಿರಿಯ ಸಾಹಿತಿ ಮತ್ತು ವಿದ್ವಾಂಸರು)

ಗುರು ಕೊಟ್ಟ ಕನ್ನಡ ದೀಕ್ಷೆ

| ಡಾ. ಹಂ.ಪ. ನಾಗರಾಜಯ್ಯ,(ಲೇಖಕರು ಕನ್ನಡದ ಹಿರಿಯ ಸಾಹಿತಿ ಮತ್ತು ಸಂಶೋಧಕರು)

1955ನೇ ಇಸವಿಯಲ್ಲಿ ಕನ್ನಡ ಬಿ.ಎ. (ಆನರ್ಸ್) ತರಗತಿಗೆ ಒಮ್ಮೆಲೇ ನಾವು 25 ಜನ ವಿದ್ಯಾರ್ಥಿಗಳು ಸೇರಿದ್ದು ನೋಡಿ ಕುವೆಂಪು ಆನಂದತುಂದಿಲರಾದರು. ಏಕೆಂದರೆ ಅದುವರೆಗೆ ಕನ್ನಡ ಆನರ್ಸ್ ಮತ್ತು ಎಂ.ಎ. ತರಗತಿಗೆ ಸರಾಸರಿ ಐದಾರು ವಿದ್ಯಾರ್ಥಿಗಳು ಮಾತ್ರ ಇರುತ್ತಿದ್ದರು. ಒಂದು ಸಲವಂತೂ ಎಸ್.ವಿ. ಪರಮೇಶ್ವರ ಭಟ್ಟರು ಒಬ್ಬರೇ! ಆನರ್ಸ್ ಮತ್ತು ಎಂ.ಎ. ತರಗತಿಯಲ್ಲಿ ಒಟ್ಟು ನಾಲ್ಕು ವರ್ಷ ಒಬ್ಬರೇ ವಿದ್ಯಾರ್ಥಿ! ಸಾಮಾನ್ಯವಾಗಿ ಮೇಷ್ಟ್ರು ಬರದಿದ್ದರೆ ವಿದ್ಯಾರ್ಥಿಗಳಿಗೆ ಕ್ಲಾಸಿಲ್ಲ. ಆದರೆ ಪರಮೇಶ್ವರ ಭಟ್ಟ ಬರದಿದ್ದರೆ ಮೇಷ್ಟ್ರಿಗೆ ಕ್ಲಾಸಿಲ್ಲ!! ವಸ್ತುಸ್ಥಿತಿ ಹೀಗಿದ್ದಾಗ ಏಕ್​ದಂ 25 ವಿದ್ಯಾರ್ಥಿಗಳನ್ನು ಕಂಡು ಕುವೆಂಪು ಹರ್ಷ ಪುಳಕಿತರಾದರು. ‘ಕನ್ನಡವನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ’ ಎಂಬ ಅವರ ಪ್ರಶ್ನೆಗೆ ಒಕ್ಕೊರಳಿನ ಉತ್ತರ- ‘ನಿಮ್ಮ ವಿದ್ಯಾರ್ಥಿ ಆಗಬೇಕೆಂಬ ಆಸೆ!’ ಅದನ್ನು ಆಲಿಸಿದ ಗುರುಗಳು ಮುಗುಳುನಗುತ್ತಾ- ‘ಕನ್ನಡ ಸಾಹಿತ್ಯ ಅಧ್ಯಯನ ಮಾಡುವ ಕನಸು ಹೊತ್ತು ಬಂದಿದ್ದೀರಿ ಅಲ್ಲವೇ?’ ಎಂದು ಕೇಳಿದರು. ನಾವೆಲ್ಲರೂ ‘ಹೌದು ಸರ್’ ಎಂದು ಅನುಮೋದಿಸಿದೆವು.

ಅನಂತರ ಅವರು ತರಗತಿಯನ್ನು ಒಮ್ಮೆ ಸಿಂಹಾವಲೋಕನ ಮಾಡಿ ಮರೆಯಲಾಗದ ಮತ್ತು ಮರೆಯಬಾರದ ಮುತ್ತಿನಂತಹ ಎರಡು ಮಾತು ಹೇಳಿದರು. ‘ಮಳೆಗಾಲದ ಪ್ರವಾಹದಂತೆ ಅಧಿಕ ಸಂಖ್ಯೆಯಲ್ಲಿ ಬಂದಿದ್ದೀರಿ. ಆದರೆ ಕನ್ನಡ ಕೊಚ್ಚಿ ಹೋಗದಂತೆ ಕಾಪಾಡಬೇಕು.’ ಮಳೆಗಾಲದ ಪ್ರವಾಹ ಮತ್ತು ಕೊಚ್ಚಿ ಹೋಗದಂತೆ ಎಂಬ ಎರಡು ಶಬ್ದಗಳು ರೂಪಕಗಳು. ‘ಪ್ರವಾಹಕ್ಕೆ ರಭಸ ಹೆಚ್ಚು, ನಿಯಂತ್ರಿಸದಿದ್ದರೆ ಅಪಾಯವೂ ಉಂಟು. ಬಹುಸಂಖ್ಯೆ ಅಷ್ಟೇ ಆದರೆ ಸಾಲದು, ಬದ್ಧತೆಯಿಂದಲೂ ಸತ್ವದಿಂದಲೂ ಕನ್ನಡಕ್ಕೆ ಅರ್ಪಿತರಾಗಿ’ ಎಂಬುದು ಧ್ವನಿ. ಇದು ನಮಗೆ ಗುರು ಕೊಟ್ಟ ಕನ್ನಡ ದೀಕ್ಷೆ, ಗುರು ಕಟ್ಟಿದ ಕನ್ನಡದ ಕಂಕಣ!

1955ರಿಂದ ಇಂದಿನತನಕ ಕನ್ನಡದ ನೋಂಪಿಯನ್ನು ಆಚರಿಸುತ್ತ ಬಂದಿದ್ದೇನೆ. ಕುವೆಂಪು ಅವರ ಬರೆಹದ ರೂಪ ಸ್ವರೂಪವನ್ನು, ಆಯಾಮ ಅನನ್ಯತೆಯನ್ನು ಕುರಿತು ನೂರಾರು ಉಪನ್ಯಾಸಗಳನ್ನು ಮಾಡಿದ್ದೇನೆ. ಯೋಗಾಯೋಗದಿಂದ ಕರ್ನಾಟಕ ಸರ್ಕಾರ ಕುಪ್ಪಳಿಯಲ್ಲಿ ಸ್ಥಾಪಿಸಿದ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಆಗುವ, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಿಸುವಾಗ ಕನ್ನಡ - ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿರುವ ಸದವಕಾಶವೂ ನನಗೆ ತಾನಾಗಿಯೇ ಒದಗಿಬಂದದ್ದು ಮತ್ತು ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇಂದು ನಾನು ಮನ್ನಣೆಗೆ ಪಾತ್ರನಾಗುತ್ತಿರುವುದಕ್ಕೂ ಶ್ರೀಗುರುವಿನ ಆಶೀರ್ವಾದ ಕಾರಣವೆಂದು ನಂಬಿದ್ದೇನೆ. ನನ್ನ ಮಡದಿ ನಾಡೋಜ ಪೊ›ಫೆಸರ್ ಕಮಲಾ ಹಂಪನಾ ಕೂಡ ಕುವೆಂಪು ಅವರ ಶಿಷ್ಯೆ ಆಗಿದ್ದುದಲ್ಲದೆ ಹೇಮಾವತಿಯವರ ಅಪಾರ ವಾತ್ಸಲ್ಯಕ್ಕೆ ಪಾತ್ರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net