

| ಕಿರಣ್ ಮಾದರಹಳ್ಳಿ ಚಾಮರಾಜನಗರ
ಶಿಥಿಲ ಕೊಠಡಿ, ಶಿಕ್ಷಕರು ಮತ್ತು ಮೂಲಸೌಕರ್ಯ ಕೊರತೆ, ದಾಖಲಾತಿ ಕುಸಿತ... ಇತ್ಯಾದಿ ನಕಾರಾತ್ಮಕ ವಿಷಯಗಳಲ್ಲೇ ಸರ್ಕಾರಿ ಶಾಲೆಗಳು ಸದ್ದು ಮಾಡುತ್ತಿರುವುದರ ನಡುವೆ, ರಾಜ್ಯದ 129 ಶಾಲೆಗಳ ಅಭಿವೃದ್ಧಿಗೆ ‘ಪಿಎಂಶ್ರೀ’ ಶ್ರೀಕಾರ ಹಾಡಲು ಸಜ್ಜಾಗುತ್ತಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಸರ್ಕಾರಿ ಶಾಲೆಗಳ ಮರು ಅಭಿವೃದ್ಧಿಗೆ ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ (ಪಿಎಂಶ್ರೀ) ಯೋಜನೆ ರೂಪಿಸಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಕೊರತೆಗಳ ಸುಳಿಯಲ್ಲಿ ಸಿಲುಕಿರುವುದು ಆಗಾಗ್ಗೆ ಸುದ್ದಿಯಾಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಆವಿಷ್ಕಾರ ಆಧಾರಿತ, ಕಲಿಕಾ ಕೇಂದ್ರಿತ ಬೋಧನಾ ವಿಧಾನಕ್ಕೆ ಒತ್ತು ನೀಡಲು ಪಿಎಂಶ್ರೀ ಯೋಜನೆಯಡಿ ರಾಜ್ಯದ 129 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
ಈ ಯೋಜನೆಯಡಿ ಸರ್ಕಾರಿ ಶಾಲೆಗಳಿಂದ ಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಪಡೆದು, ವಿವಿಧ ಮಾನದಂಡಗಳ ಆಧಾರದ ಮೇಲೆ ದೇಶದಲ್ಲಿ 14,500 ಶಾಲೆಗಳನ್ನು ಮರು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 18,128 ಕೋಟಿ ರೂ. ಕೇಂದ್ರದ ಪಾಲು ಒಳಗೊಂಡಂತೆ, ಒಟ್ಟು 27,360 ಕೋಟಿ ರೂ. ವೆಚ್ಚ ತಗುಲಲಿದೆ. ಎನ್ಇಪಿ-2020ರ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಕಳೆದ ಜು.29ರಂದು ಪಿಎಂಶ್ರೀ ಯೋಜನೆಗೆ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಈ ಮೂಲಕ ಕರ್ನಾಟಕದ 129 ಸರ್ಕಾರಿ ಶಾಲೆಗಳಿಗೆ ಮರು ಅಭಿವೃದ್ಧಿಯ ಭಾಗ್ಯ ಲಭಿಸುತ್ತಿದೆ. ಪಿಎಂಶ್ರೀ ಯೋಜನೆ 2022-23ರಿಂದ 2026-27ರ ಅವಧಿಯೊಳಗೆ ಪೂರ್ಣಗೊಳ್ಳಲಿದೆ.
ಬದಲಾಗಲಿದೆ ಚಿತ್ರಣ: ಪಿಎಂಶ್ರೀ ಯೋಜನೆಯ ಮೂಲಕ ಎನ್ಇಪಿ ಅಂಶಗಳ ಅನ್ವಯ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಆಯ್ಕೆಯಾಗಿರುವ ಶಾಲೆಗಳಿಗೆ ಸೌರಫಲಕಗಳು, ಎಲ್ಇಡಿ ದೀಪಗಳು, ಉದ್ಯಾನ, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ವುುಕ್ತ, ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು ಸೌಲಭ್ಯ ದೊರೆಯಲಿದೆ. ಬೋಧನಾ ವಿಧಾನವು ಆಟ/ಆಟಿಕೆ, ಆವಿಷ್ಕಾರ, ಚರ್ಚೆ ಆಧಾರಿತ, ಕಲಿಕೆ ಕೇಂದ್ರಿತ, ಪ್ರತಿ ಮಗುವಿನ ಕಲಿಕೆಯ ಮೇಲೂ ಗಮನಹರಿಸುವುದು, ಸ್ಥಳೀಯ ಕುಶಲಕರ್ವಿುಗಳೊಂದಿಗೆ ತರಬೇತಿ, ವಿಜ್ಞಾನ ಮತ್ತು ಗಣಿತ ಕಿಟ್ ವಿತರಣೆ, ಸ್ಮಾರ್ಟ್ ತರಗತಿಗಳು, ಡಿಜಿಟಲ್ ಗ್ರಂಥಾಲಯ, ಡಿಜಿಟಲ್ ಬೋಧನಾ ಕ್ರಮ, ಮೂಲಸೌಕರ್ಯ ಬಲಪಡಿಸುವುದು ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಚಾಮರಾಜನಗರ ಜಿಲ್ಲೆಯಿಂದ ಪಿಎಂಶ್ರೀ ಯೋಜನೆಗಾಗಿ 182 ಶಾಲೆಗಳು ಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿದ್ದವು. ಇವುಗಳಲ್ಲಿ ವಿವಿಧ ಮಾನದಂಡ ಆಧರಿಸಿ 4 ಶಾಲೆಗಳು ಆಯ್ಕೆಯಾದವು. ಪಿಎಂಶ್ರೀ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಉತ್ತಮ ಯೋಜನೆಯಾಗಿದೆ. | ರಾಮಚಂದ್ರರಾಜೇ ಅರಸ್, ಚಾಮರಾಜನಗರ ಡಿಡಿಪಿಐ ಖಾಸಗಿ ಶಾಲೆಗಳು ನೀಡುತ್ತಿರುವ ಸ್ಪರ್ಧೆಯ ನಡುವೆ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಪಿಎಂಶ್ರೀ ಯೋಜನೆ ಸಹಕಾರಿಯಾಗುವ ಭರವಸೆ ಮೂಡಿಸಿದೆ. ಈ ಯೋಜನೆಗೆ ನಮ್ಮ ಶಾಲೆ ಆಯ್ಕೆಯಾಗಿರುವುದಕ್ಕೆ ತುಂಬ ಖುಷಿಯಾಗಿದ್ದು, ಬಡವರ ಮಕ್ಕಳೇ ಓದುವ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡುತ್ತಿರುವುದು ಸಂತಸ ತಂದಿದೆ. | ಎಂ. ಶಾಂತಿ, ಚಾಮರಾಜನಗರದ ನಾಗವಳ್ಳಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ
ಜನಭಾಗಿತ್ವ ಕಾರ್ಯಕ್ರಮ: ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವ ಶಾಲೆಗಳಲ್ಲಿ ಜನಭಾಗಿತ್ವ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡಲಾಗಿದೆ. ಶಾಲೆಯ ಕುರಿತು ಜಾಗೃತಿ ಜಾಥಾ, ಮೆರವಣಿಗೆ ನಡೆಸಲಾಗುತ್ತಿದೆ. ಸಾರ್ವಜನಿಕರು ಮತ್ತು ಎಸ್ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿಯೊಂದಿಗೆ ಸಭೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ರಂಗೋಲಿ ಸ್ಪರ್ಧೆ ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಶಾಲೆಗಳು ಆಯ್ಕೆ?: ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ತಲಾ 8 ಶಾಲೆಗಳು ಆಯ್ಕೆಯಾಗಿವೆ. ಹಾಸನದ 7, ಮಂಡ್ಯ 6, ಮಧುಗಿರಿ-5, ಬಾಗಲಕೋಟೆ-4, ಧಾರವಾಡ-4, ಕೊಡಗು-3, ಚಾಮರಾಜನಗರ-4, ಗದಗ-2, ಯಾದಗಿರಿ-1, ಬಳ್ಳಾರಿ-1 ಶಾಲೆ ಸೇರಿದಂತೆ ಇತರ ಜಿಲ್ಲೆಗಳೂ ಸೇರಿ ರಾಜ್ಯದಲ್ಲಿ ಒಟ್ಟು 129 ಶಾಲೆಗಳಿಗೆ ಅಭಿವೃದ್ಧಿಯ ಭಾಗ್ಯ ಲಭಿಸಿದೆ.
ಎರಡನೇ ಹಂತದ ನಿರೀಕ್ಷೆಯಲ್ಲಿ: ಪಿಎಂಶ್ರೀ ಯೋಜನೆಗೆ ಆಯ್ಕೆಯಾಗದೆ ಇರುವ ಶಾಲೆಗಳು ಎರಡನೇ ಹಂತದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿವೆ. ಬೀದರ್, ಕೊಪ್ಪಳ ಜಿಲ್ಲೆಗಳ ಸರ್ಕಾರಿ ಶಾಲೆಗಳು ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿಲ್ಲ. ಮುಂದಿನ ಹಂತದಲ್ಲಿ ಆಯ್ಕೆಯಾಗಬಹುದು ಎಂದು ಎರಡೂ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಲಾ 53 ಲಕ್ಷ ರೂ. ಅನುದಾನ: ಕರ್ನಾಟಕದಲ್ಲಿ ಗುರುತಿಸಲಾಗಿರುವ 129 ಸರ್ಕಾರಿ ಶಾಲೆಗಳ ಮರು ಅಭಿವೃದ್ಧಿಗೆ ಮೊದಲ ಹಂತದಲ್ಲಿ ಅಂದಾಜು ತಲಾ 53 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಆಯ್ಕೆಯಾಗುವುದಕ್ಕೂ ಮೊದಲೇ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆಗಳನ್ನು ಪಿಎಂಶ್ರೀ ಯೋಜನೆಗೆ ನೀಡಲಾಗಿದೆ. ಇದರನ್ವಯ ಶಾಲೆಗಳ ಅಭಿವೃದ್ಧಿಯಾಗಲಿದೆ. ಈ ಸಂಬಂಧ ಆಯ್ಕೆಯಾಗಿರುವ ಶಾಲೆಗಳಿರುವ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ಮುಖ್ಯಶಿಕ್ಷಕರ ಸಭೆ ನಡೆಸಿದ್ದಾರೆ. ಆಯ್ಕೆಯಾಗಿರುವ ಶಾಲೆಗಳು ಪ್ರಸ್ತುತ ಜನರ ಸಹಭಾಗಿತ್ವದಲ್ಲಿ ವಿವಿಧ ಚಟುವಟಕೆಗಳಲ್ಲಿ ತೊಡಗಿಕೊಂಡಿವೆ. ಇದನ್ನು ಮುಖ್ಯಶಿಕ್ಷಕರು ಗೂಗಲ್ ಟ್ರ್ಯಾಕ್ನಲ್ಲಿ ಅಪ್ಲೋಡ್ ಕೂಡ ಮಾಡುತ್ತಿದ್ದಾರೆ.