ಮಂಗಳ ಸಂದೇಶದ ನಿರೀಕ್ಷೆಯಲ್ಲಿದೆ ದೇಶ: ರಾತ್ರಿ ಎಂಟಕ್ಕೆ ಪ್ರಧಾನಿ ಮೋದಿ ಮಾತನಾಡ್ತಾರೆ...

PM Modi File Pic 14 APR 20
Published on

ನವದೆಹಲಿ: ಕರೊನಾ ವೈರಸ್ ಸೋಂಕು ತಡೆಯುವ ಸಲುವಾಗಿ ದೇಶಾದ್ಯಂತ ಮಾರ್ಚ್ ಕೊನೆಯವಾರದಲ್ಲಿ ಆರಂಭವಾದ ಲಾಕ್​ಡೌನ್​ ಇದೀಗ ಮೂರನೇ ಹಂತದ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಸೋಂಕು ನಿಯಂತ್ರಣದಲ್ಲಿದ್ದು, ನಿಧಾನವಾಗಿ ಹಂತ ಹಂತವಾಗಿ ಲಾಕ್​ಡೌನ್ ಹಿಂಪಡೆಯುವ ಲಕ್ಷಣಗಳು ಗೋಚರಿಸತೊಡಗಿವೆ.

ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆಯಷ್ಟೇ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಿದ್ದರು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ವಸ್ತುಸ್ಥಿತಿಯ ಮಾಹಿತಿಯನ್ನು ಕಲೆಹಾಕಿದ್ದಾರೆ. ಕರ್ನಾಟಕದ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಹಿತಿಯನ್ನು ನೀಡಿದ್ದು, ರಾಜ್ಯದಲ್ಲಿ ತೆಗೆದುಕೊಂಡಿರುವ ಕ್ರಮಗಳ ವಿವರವನ್ನೂ ನೀಡಿದ್ದಾರೆ. ಈ ಮಾತುಕತೆ ಬಳಿಕ, ಲಾಕ್​ ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎಂಬ ಸುಳಿವನ್ನು ಬಿಎಸ್​ವೈ ನೀಡಿದ್ದರು. ಆದರೆ ಒಂದಷ್ಟು ನಿರ್ಬಂಧ ಸಡಿಲಗೊಳಿಸುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ.

ಇಷ್ಟೆಲ್ಲ ಬೆಳವಣಿಗೆಯ ನಡುವೆ, ಮಂಗಳವಾರ ಬೆಳಗ್ಗೆ ಪ್ರಧಾನಮಂತ್ರಿ ಕಚೇರಿಯ ಟ್ವಿಟರ್​ ಹ್ಯಾಂಡಲ್​ನಲ್ಲಿ ಬಂದ ಸಂದೇಶ ದೇಶದ ಗಮನಸೆಳೆದಿದ್ದು, ಎಲ್ಲರಲ್ಲೂ ಮಂಗಳ ಸಂದೇಶದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾತ್ರಿ ಎಂಟು ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಒಂದು ವಾಕ್ಯದ ಸಂದೇಶ ಅಲ್ಲಿದೆ.

ಇದರೊಂದಿಗೆ, ಲಾಕ್​ಡೌನ್ ಮುಂದುವರಿಯುತ್ತಾ? ಸಾರಿಗೆ ಸಂಚಾರ ಮತ್ತೆ ಶುರುವಾಗತ್ತಾ? ವಿಮಾನ ಹಾರಾಟ ಶುರುವಾಗತ್ತ?, ಶಾಲಾ,ಕಾಲೇಜುಗಳ ಪರಿಸ್ಥಿತಿ ಏನು? ಮೇ 31ರ ತನಕ ನಿರ್ಬಂಧ ಇರುತ್ತಾ? ಹೀಗೆ ಹಲವಾರು ಪ್ರಶ್ನೆಗಳು ಜನರಿಗೆ ಕಾಡಿದ್ದು, ಅದರ ಕುರಿತಾದ ಮಾತುಕತೆಯೇ ಜೋರಾಗಿದೆ. ಹೀಗಾಗಿ ಎಲ್ಲರ ಗಮನವೂ ಇಂದು ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮಾಡಲಿರುವ ಭಾಷಣ ಕಡೆಗೆ ನೆಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net