

ಭೂತಾನ್: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಭೂತಾನ್ ಪ್ರವಾಸ ಕೈಗೊಂಡಿದ್ದರು. ನೆರೆಯ ದೇಶ ಭೂತಾನ್‌ಗೆ ಕಾಲಿಡುತ್ತಿದ್ದಂತೆ ಭಾರತದ ಪ್ರಧಾನಮಂತ್ರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಕಾರ್ಯಕ್ರಮಗಳ ನಂತರ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಪೋ' ಅನ್ನು ಪ್ರಧಾನಿ ಮೋದಿಗೆ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿಯನ್ನು ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್ ವಾಕ್ಚುಕ್ ಮೋದಿ ಅವರಿಗೆ ನೀಡಿ ಗೌರವಿಸಿದರು. ವಿಶೇಷವಾಗಿ ನರೇಂದ್ರ ಮೋದಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಇನ್ನು ಅವಾರ್ಡ್ ಪಡೆದ ಬಗ್ಗೆ ಮಾತನಾಡಿದ ಪ್ರಧಾನಿ, 'ನಾನು ಇದನ್ನು 140 ಕೋಟಿ ಭಾರತೀಯರಿಗೆ ಅರ್ಪಿಸುತ್ತೇನೆ' ಎಂದರು.
“ಈ ಗೌರವ ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತ ಮತ್ತು 140 ಕೋಟಿ ಭಾರತೀಯರ ಗೌರವ. ಭೂತಾನ್‌ನ ಈ ಮಹಾನ್ ಭೂಮಿಯಲ್ಲಿರುವ ಎಲ್ಲಾ ಭಾರತೀಯರ ಪರವಾಗಿ ನಾನು ಈ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಈ ಪ್ರಶಸ್ತಿಗಾಗಿ ನನ್ನ ಹೃದಯದ ಅಂತರಾಳದಿಂದ ಧನ್ಯವಾದ ತಿಳಿಸುತ್ತೇನೆ" ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋದಿ ಹೇಳಿದರು,(ಏಜೆನ್ಸೀಸ್).