

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಕೆಲವು ದಿನಗಳಲ್ಲಿ ಪದೇಪದೆ ಕರ್ನಾಟಕಕ್ಕೆ ಬರುತ್ತಿದ್ದು, ನಾಳೆಯೂ ಮತ್ತೊಮ್ಮೆ ಆಗಮಿಸಲಿದ್ದಾರೆ. ಅದರಲ್ಲೂ ನಾಳೆ ಕರ್ನಾಟಕಕ್ಕೆ ಬರಲಿರುವ ಅವರು ಇಂದೇ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಈಗಾಗಲೇ ಕನ್ನಡಿಗರ ಗಮನ ಸೆಳೆದಿದ್ದಾರೆ.
ನಾಳೆ ಪ್ರಧಾನಿ ಮೋದಿಯವರಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಯಾಗಲಿರುವ ಕುರಿತು ಸಂಸದ ಪ್ರತಾಪ್ ಸಿಂಹ ಕನ್ನಡದಲ್ಲಿ ಮಾಡಿದ್ದ ಟ್ವೀಟ್, ಕೋಟ್-ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅದಕ್ಕೆ ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
'ನಮ್ಮ ಸರ್ಕಾರ ಸಂಪರ್ಕ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವತ್ತ ಕೆಲಸ ಮಾಡುತ್ತಿದೆ. ಮೈಸೂರು ಮತ್ತು ಬೆಂಗಳೂರು ನಡುವಿನ ಹೆದ್ದಾರಿ ಮಾರ್ಗ ಆ ದಿಕ್ಕಿನತ್ತ ಹೆಜ್ಜೆಯಾಗಿದೆ..' ಎಂದು ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಅರ್ಥಾತ್ ಮೋದಿ ಅಕೌಂಟ್ನಿಂದ ಟ್ವೀಟ್ ಆಗಿದ್ದು ಮೋಡಿ ಮಾಡಿದೆ.
ಇನ್ನು ನಿನ್ನೆಯಷ್ಟೇ ಸಂಸದೆ ಸುಮಲತಾ ಅವರು ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದರು. ಮಂಡ್ಯ ಮೂಲಕ ಹಾದು ಹೋಗುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ಮಾಡಲಿರುವ ಮೋದಿ ನಾಳೆ ಕನ್ನಡದಲ್ಲಿ ಮಾತನಾಡುವ ಜೊತೆಗೆ ಅಂಬರೀಷ್ ಸಿನಿಮಾದ ಡೈಲಾಗ್ ಕೂಡ ಹೇಳಬಹುದು ಎಂಬ ನಿರೀಕ್ಷೆ ಮೂಡಿದೆ. ಅದರಲ್ಲೂ ಅಂಬಿ ಸಿನಿಮಾ ಡೈಲಾಗ್ ಮೂಲಕವೇ ಅವರು ತಮ್ಮ ರಾಜಕೀಯ ಎದುರಾಳಿಗಳಿಗೆ ಟಾಂಗ್ ನೀಡಲಿದ್ದಾರೆ ಎಂದೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಲಾರಂಭಿಸಿದ್ದಾರೆ.