ಸೆ. 13ರಂದು ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ; ಕೇವಲ 3 ಗಂಟೆಯ ಭೇಟಿ ಮಣಿಪುರಿಗಳಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಕಿಡಿ| Congress

Jairam Ramesh
Published on

Congress: ಪ್ರಧಾನಿ ಮೋದಿಯವರು ಸೆ. 13ರಂದು ಹಿಂಸಾಚಾರ ಪೀಡಿತ ಮಣಿಪುರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಕೇವಲ 3 ಗಂಟೆಯ ಭೇಟಿಗೆ ಸಮಯ ನಿಗದಿ ಪಡಿಸಿದ್ದಕ್ಕೆ, 29 ತಿಂಗಳಿನಿಂದ ನರಕಯಾತನೆ ಅನುಭವಿಸಿದ ಅಲ್ಲಿನ ಜನರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

2023ರ ಮೇ ತಿಂಗಳಿನಲ್ಲಿ ಆರಂಭವಾದ ಜನಾಂಗೀಯ ಸಂಘರ್ಷ, ಮುಂದೆ ಹಲವಾರು ಜನರ ಸಾವು-ನೋವುಗಳಿಗೆ ಕಾರಣವಾಗಿತ್ತು. ಸದ್ಯ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದು, ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಸೆಪ್ಟೆಂಬರ್ 13 ರಂದು ಪ್ರಧಾನಿ ಮಣಿಪುರಕ್ಕೆ ನೀಡಲಿರುವ ಪ್ರಸ್ತಾವಿತ ಭೇಟಿಯನ್ನು ಅವರ ಚಿಯರ್‌ಲೀಡರ್‌ಗಳು ಸ್ವಾಗತಿಸುತ್ತಿದ್ದಾರೆ. ಆದರೆ ಪ್ರಧಾನಿ ರಾಜ್ಯದಲ್ಲಿ ಕೇವಲ 3 ಗಂಟೆಗಳನ್ನು,  ಹೌದು ಕೇವಲ 3 ಗಂಟೆಗಳನ್ನು ಮಾತ್ರ ಕಳೆಯಲಿದ್ದಾರೆ ಎಂದು ತೋರುತ್ತದೆ. ಇಂತಹ ಆತುರದ ಪ್ರವಾಸದಿಂದ ಅವರು ಏನನ್ನು ಸಾಧಿಸಲು ಆಶಿಸುತ್ತಾರೆ?" ಎಂದು ಕಿಡಿಕಾರಿದ್ದಾರೆ.

ವಾಸ್ತವವಾಗಿ ಇದು 29 ದೀರ್ಘ ಮತ್ತು ಯಾತನಾಮಯ ತಿಂಗಳುಗಳಿಂದ ಅವರಿಗಾಗಿ ಕಾಯುತ್ತಿದ್ದ ರಾಜ್ಯದ ಜನರಿಗೆ ಮಾಡಿದ ಅವಮಾನವಾಗಿದೆ. ಸೆಪ್ಟೆಂಬರ್ 13 ವಾಸ್ತವವಾಗಿ ಅದು ಪ್ರಧಾನಿಯ ಭೇಟಿಯಲ್ಲ, ಮಣಿಪುರದ ಜನರ ಬಗ್ಗೆ ತಮ್ಮ ನಿರ್ದಯತೆ ಮತ್ತು ಸಂವೇದನಾಶೀಲತೆಯನ್ನು ಪ್ರಧಾನಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈತೈಯಿ ಮತ್ತು ಕುಕಿ-ಝೋ ಬುಡಕಟ್ಟು ಜನಾಂಗದ ನಡುವಿನ ಜನಾಂಗೀಯ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಉಂಟಾದ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಸುಮಾರು 60,000 ಜನರು ಸ್ಥಳಾಂತರಗೊಂಡಿದ್ದಾರೆ. ಹಿಂಸಾಚಾರ ಕಡಿಮೆಯಾಗಿ ತಿಂಗಳುಗಳೇ ಕಳೆದಿವೆ. ಆದರೆ ಹಿಂಸಾಚಾರದಿಂದ ಎರಡು ವರ್ಷಗಳಾದ್ರೂ ಹೆಚ್ಚು ಕಾಲ ರಾಜ್ಯವು  ಇನ್ನೂ ಜನಾಂಗೀಯವಾಗಿ ವಿಭಜನೆಯಾಗಿಯೆ ಇದೆ. 2 ಸಮುದಾಯಗಳ ಜನರು ಇನ್ನು ಪರಸ್ಪರ ಪ್ರದೇಶಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net