

ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೆ ನರೇಂದ್ರ ಮೋದಿ ಅವರು ದೇಶದ ರೈತರಿಗೆ ಮೊದಲ ಕೊಡುಗೆ ನೀಡಿದ್ದಾರೆ. ರೈತರ ಹಿತದೃಷ್ಟಿಯಿಂದ ಮೊದಲ ನಿರ್ಧಾರ ಕೈಗೊಂಡು ಪಿಎಂ ಕಿಸಾನ್ ನಿಧಿಯ 17ನೇ ಕಂತು ಬಿಡುಗಡೆ ಮಾಡುವ ಅಧಿಕೃತ ಕಡತಕ್ಕೆ ಪಿಎಂ ಮೋದಿ ಸಹಿ ಹಾಕಿದರು. ಪ್ರಧಾನಮಂತ್ರಿಯವರ ಕಚೇರಿಯಲ್ಲಿ ಸಹಿ ಮಾಡಲಾದ ಮೊದಲ ಕಡತವು ರೈತರನ್ನು ಓಲೈಸುವ ಗುರಿಯನ್ನು ಹೊಂದಿದೆ.
ಮೋದಿ ಅವರು ಬಿಡುಗಡೆ ಮಾಡಿರುವ ಕಿಸಾನ್ ನಿಧಿಯ 17ನೇ ಕಂತಿನಿಂದ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ. ಈ ಕಂತಿನಡಿ ಸುಮಾರು 20,000 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗುವುದು. ಪಿಎಂ ಕಿಸಾನ್ ನಿಧಿಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದ ನಂತರ ಮೋದಿ ಅವರು ನಮ್ಮ ಸರ್ಕಾರ ರೈತರ ಕಲ್ಯಾಣಕ್ಕಾಗಿ ಸಂಪೂರ್ಣವಾಗಿ ಸಮರ್ಪಿತವಾಗಿದೆ ಎಂದು ಹೇಳಿದರು. ಹಾಗೂ ಮುಂದಿನ ದಿನಗಳಲ್ಲಿ ರೈತರು ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.
ಪಿಎಂ ಕಿಸಾನ್ ನಿಧಿ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಲಾಯಿತು. ಯೋಜನೆಯ 16ನೇ ಕಂತನ್ನು ಫೆಬ್ರವರಿ 28ರಂದು ಬಿಡುಗಡೆ ಮಾಡಲಾಗಿದೆ. ಪಿಎಂ ಕಿಸಾನ್ ನಿಧಿ ಅಡಿಯಲ್ಲಿ ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷದಲ್ಲಿ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿಯಂತೆ ಒಂದು ವರ್ಷದಲ್ಲಿ ಒಟ್ಟು 6000 ರೂಪಾಯಿ ರೈತರ ಖಾತೆಗೆ ಜಮೆಯಾಗಲಿದೆ. (ಏಜೆನ್ಸೀಸ್)