

ಬೆಂಗಳೂರು : ಉಲ್ಬಣವಾಗುತ್ತಿರುವ ಕರೊನಾ ಸೋಂಕಿನ ನಿಯಂತ್ರಣಕ್ಕೆ ಈಗಾಗಲೇ ಕರ್ನಾಟಕ ಸರ್ಕಾರ ಕೆಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದ್ದು, ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕರೊನಾ ನಿಯಂತ್ರಿಸಲು ಮೈಕ್ರೋಕಂಟೈನ್ಮೆಂಟ್ ಜೋನ್ಗಳನ್ನು ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
"ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇಂದು ಮಾತನಾಡಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ರಾಜ್ಯದ ಕ್ರಮಗಳ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಮೈಕ್ರೋಕಂಟೈನ್ಮೆಂಟ್ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದ್ದಾರೆ" ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.
ಈ ಮುನ್ನ ದೇಶದಲ್ಲಿ ಏಪ್ರಿಲ್ 11 ರಿಂದ 14 ರವರೆಗೆ ನಡೆಯುತ್ತಿರುವ ಟೀಕಾ ಉತ್ಸವ್ಅನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಯಡಿಯೂರಪ್ಪ ಅವರು, "ಕರೊನಾ ವಿರುದ್ಧದ ಈ ಯುದ್ಧದಲ್ಲಿ ಲಸಿಕೆಯು ನಮಗೆ ಲಭ್ಯವಿರುವ ಅತಿದೊಡ್ಡ ಶಸ್ತ್ರವಾಗಿದೆ. ಎಲ್ಲಾ ಅರ್ಹ ನಾಗರೀಕರು ಲಸಿಕೆ ಪಡೆಯಬೇಕು ಮತ್ತು ನಿಮ್ಮ ಸುತ್ತಮುತ್ತಲ ಜನರನ್ನೂ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ಮಾಸ್ಕ್ ತೊಟ್ಟು ಮತ್ತು ಸಾಮಾಜಿಕ ಅಂತರ ಪಾಲಿಸಿ ಸುರಕ್ಷಿತವಾಗಿರುವುದನ್ನು ಮುಂದುವರೆಸೋಣ" ಎಂದಿದ್ದಾರೆ. (ಏಜೆನ್ಸೀಸ್)