

ಶ್ರೀನಗರ : ರಜೆಯ ಮೇಲಿದ್ದ ಭಾರತೀಯ ಸೇನೆಯ ಸೈನಿಕರೊಬ್ಬರನ್ನು ಲಷ್ಕರ್ಎತೈಬಾದ ಇಬ್ಬರು ಭಯೋತ್ಪಾದಕರು ಗುಂಡಿಟ್ಟು ಕೊಂದಿರುವ ಘಟನೆ ಕಾಶ್ಮೀರದಿಂದ ವರದಿಯಾಗಿದೆ. ಮೂರು ಬಾರಿ ಕಮೆಂಡೇಷನ್ ಕಾರ್ಡ್ (ಮೆಚ್ಚುಗೆ ಪತ್ರ) ನೀಡಲಾಗಿದ್ದ 35 ವರ್ಷ ವಯಸ್ಸಿನ ಮೊಹಮ್ಮದ್ ಸಲೀಂ ಅಖೂನ್ ಎಂಬುವರೇ ಹುತಾತ್ಮರಾದ ಸೈನಿಕ.
ಅಖೂನ್ ಅವರು ಕಾಶ್ಮೀರದ ಬಿಜ್ಬೆಹಾರಾ ಜಿಲ್ಲೆಯ ಜಬ್ಲಿಪೋರ ಪ್ರದೇಶದಲ್ಲಿದ್ದ ತಮ್ಮ ನಿವಾಸದಲ್ಲಿದ್ದಾಗ ಇಬ್ಬರು ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದು, ಮೊದಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅಲ್ಲಿಂದ ಶ್ರೀನಗರದ ಜಿಎಂಸಿ ಆಸ್ಪತ್ರೆಗೆ ಕರದೊಯ್ದಾಗ ಮೃತರೆಂದು ಘೋಷಿಸಲಾಯಿತು ಎನ್ನಲಾಗಿದೆ.
ಸೇನಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಮೊಹಮ್ಮದ್ ಸಲೀಂ ಅಖೂನ್ ಅವರಿಗೆ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಯೋತ್ಪಾದಕರು ಬೆದರಿಕೆ ನೀಡಿದ್ದರು. ಆದಾಗ್ಯೂ ಕೆಚ್ಚೆದೆಯ ಅಖೂನ್ ಅವರ ಉತ್ಸಾಹ ಕುಗ್ಗಿರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)