

ಸಂಗಾರೆಡ್ಡಿ (ತೆಲಂಗಾಣ): ಯುವ ನಾಯಕತ್ವವನ್ನು ಬೆಳೆಸಲು ಕಾಂಗ್ರೆಸ್ ಪಕ್ಷ ಭಯಪಡುತ್ತಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, 75-80 ವರ್ಷದ ನಾಯಕರನ್ನು ಪಕ್ಷ ನೇಮಿಸುತ್ತಿದೆ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಪರೋಕ್ಷವಾಗಿ ಟೀಕಾ ಪ್ರಹಾರ ಮಾಡಿದರು.
ಸಾವಿರಾರು ಕೋಟಿ ರೂ. ಹಗರಣಗಳನ್ನು ತಾವು ಬಹಿರಂಗಪಡಿಸುತ್ತಿರುವುದರಿಂದ ‘ವಂಶ ರಾಜಕಾರಣದ ಪಕ್ಷಗಳು’ ತಮ್ಮನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಇಲ್ಲಿ ಬಿಜೆಪಿ ರ್ಯಾಲಿಯೊಂದರಲ್ಲಿ ಮೋದಿ ಹೇಳಿದರು. ತಾವು ಯಾವತ್ತೂ ವೈಯಕ್ತಿಕವಾಗಿ ದಾಳಿ ನಡೆಸಿಲ್ಲ. ಆದರೆ, ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿರುವುದಾಗಿ ಹೇಳಿದರು. ಸಾರ್ವಜನಿಕರಿಗೆ ಕೊಟ್ಟಿರುವ ‘ಗ್ಯಾರಂಟಿ’ ಅನುಷ್ಠಾನ ಗೊಳಿಸಲು ತಾವು ಉತ್ಸುಕರಾಗಿರುವ ಕಾರಣ ಕಾಂಗ್ರೆಸ್ ಮತ್ತದರ ಮಿತ್ರರು ತಮ್ಮನ್ನು ಹಾಗೂ ತಮ್ಮ ‘ಪರಿವಾರ’ವನ್ನು ದೂಷಿಸುತ್ತಿದ್ದಾರೆಂದು ಮೋದಿ ಆರೋಪಿಸಿದರು. ‘ವಂಶರಾಜಕಾರಣ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಹಾಗೂ ಯುವಜನರ ಅವಕಾಶಗಳನ್ನು ವಂಚಿಸುವುದರಿಂದ ನಾನು ವಿರೋಧಿಸುತ್ತೇನೆ. ಅದಕ್ಕೆ ಪ್ರತಿಕ್ರಿಯಿಸದ ಕಾಂಗ್ರೆಸ್ ನಾಯಕರು ಮೋದಿಗೆ ಕುಟುಂಬವಿಲ್ಲ ಎನ್ನುತ್ತಾರೆ’ ಎಂದು ಪ್ರಧಾನಿ ಟೀಕಿಸಿದರು.
ರಾಜ್ಯಗಳು ನಾಶ: ಜಮ್ಮು-ಕಾಶ್ಮೀರದಿಂದ ತಮಿಳುನಾಡಿನ ವರೆಗೆ ಕುಟುಂಬ ಆಧಾರಿತ ಪಕ್ಷಗಳು ಆಡಳಿತ ನಡೆಸಿದ ರಾಜ್ಯಗಳು ನಾಶವಾಗಿವೆ ಎಂದೂ ಮೋದಿ ಹೇಳಿದರು. ಆ ಕುಟುಂಬಗಳು ಬಲಗೊಂಡಿವೆಯೇ ಹೊರತು ರಾಜ್ಯಗಳಲ್ಲ. ಇಂಥ ವಂಶಾಡಳಿತ ರಾಜಕಾರಣವನ್ನು ಮುಂದುವರಿಸಬೇಕೇ ಎಂದು ಅವರು ಪ್ರಶ್ನಿಸಿದರು. ಕುಟುಂಬ ರಾಜಕಾರಣದ ಪಕ್ಷಗಳು ಪ್ರಜಾಪ್ರಭುತ್ವ-ವಿರೋಧಿ, ಪ್ರತಿಭೆ-ವಿರೋಧಿ ಹಾಗೂ ಯುವಜನ-ವಿರೋಧಿ ಎಂದು ವಿಶ್ಲೇಷಿಸಿದರು.
ಒಂದೇ ನಾಣ್ಯದ ಎರಡು ಮುಖ: ತೆಲಂಗಾಣದ ಆಳುವ ಕಾಂಗ್ರೆಸ್ ಮತ್ತು ಬಿಆರ್ಎಸ್ ಪಕ್ಷ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಟೀಕಿಸಿದರು. ಈ ಎರಡು ಪಕ್ಷಗಳ ನಡುವೆ ‘ಹಗರಣಗಳ ಬಂಧ’ ಇರುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದರು. ತೆಲಂಗಾಣ ರಾಜ್ಯವು ಕಾಂಗ್ರೆಸ್ ಪಕ್ಷದ ಹೊಸ ಎಟಿಎಂ ಆಗಿದೆ ಎಂದು ಟೀಕಿಸಿದರು. ಪ್ರಧಾನಿ ಮೋದಿ ಮಂಗಳವಾರ ಹೈದರಾಬಾದ್ನಲ್ಲಿರುವ ಶ್ರೀ ಉಜ್ಜಯಿನಿ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವಂಶ ರಾಜಕಾರಣಕ್ಕೆ ಷಾ ಪ್ರಶ್ನೆ: ವಂಶ ರಾಜಕಾರಣವನ್ನು ಮಾಡುವವರು ದೇಶದ ಪ್ರಜಾಪ್ರಭುತ್ವವನ್ನು ಹೇಗೆ ಬಲಪಡಿಸಬಲ್ಲರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದ ಯುವ ರ್ಯಾಲಿಯಲ್ಲಿ ಪ್ರಶ್ನಿಸಿದರು.
ಒಡಿಶಾದಲ್ಲಿ 19,600 ಕೋಟಿ ರೂ. ಯೋಜನೆ: ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ರಾಜಧಾನಿ ಹೈದರಾಬಾದ್ನಿಂದ 60 ಕಿಮೀ ದೂರದಲ್ಲಿರುವ ಸಂಗಾರೆಡ್ಡಿಯಲ್ಲಿ ಮಂಗಳವಾರ 7,200 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಲೋಕಾರ್ಪಣೆ/ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯಗಳ ವಿಕಾಸದ ಮೂಲಕ ರಾಷ್ಟ್ರ ವಿಕಾಸದ ಮಂತ್ರದಲ್ಲಿ ತಮಗೆ ನಂಬಿಕೆ ಇದೆ. ಭಾರತ ಅಭಿವೃದ್ಧಿ ಹೊಂದಬೇಕಾದರೆ ಆಧುನಿಕ ಮೂಲಸೌಕರ್ಯ ಅಗತ್ಯ. ಅದಕ್ಕಾಗಿ ಕೇಂದ್ರ ಸರ್ಕಾರ ಈ ವರ್ಷದ ಬಜೆಟ್ನಲ್ಲಿ 11 ಲಕ್ಷ ಕೋಟಿ ರೂ. ಒದಗಿಸಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಚಾಂದಿಕ್ಹೋಲೆಯಲ್ಲಿ 19,600 ಕೋಟಿ ರೂ. ವೆಚ್ಚದ ನಾನಾ ಯೋಜನೆಗಳಿಗೆ ಚಾಲನೆ ನೀಡಿದರು.