ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ

Prime Minister Narendra Modi
ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
Published on

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾದ ನಂತರ ಪ್ರಧಾನಿ ನರೇಂದ್ರ ಮೋದಿ ಮೇ 5 ರಂದು ರಾಜ್ಯಕ್ಕೆ ಮೋದಿ ಮೂರನೇ ಬಾರಿ‌ ಚುನಾವಣಾ ಪ್ರಚಾರದ ಅಖಾಡ ಪ್ರವೇಶಿಸಲಿದ್ದಾರೆ.

ಮೇ 5 ರಂದು ಬಳ್ಳಾರಿ ಮತ್ತು ತುಮಕೂರುಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಮೋದಿ ಭಾಗಿಯಾದ ನಂತರ ಅಂದು ರಾತ್ರಿ‌ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು ಮೇ 06ರಂದು ಬೆಂಗಳೂರಿನಲ್ಲಿ ಐತಿಹಾಸಿಕ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿ ವಿ ರಾಮನ್ ನಗರ ಕ್ಷೇತ್ರದಿಂದ‌ ಬ್ರಿಗೇಡ್ ರಸ್ತೆವರೆಗೆ ಸುಮಾರು 8 ಕಿ.ಮೀ ಉದ್ದದ ಮೊದಲ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30 ರ ತನಕ ಎರಡನೇ ಮೆಗಾ ರೋಡ್ ಶೋ ಕೋಣನಕುಂಟೆ ಬಳಿಯ ಬ್ರಿಗೇಡ್ ಮಿಲೆನಿಯಂನಿಂದ ಸ್ಯಾಂಕಿ ಕೆರೆ ವರೆಗೆ 29.4 ಕಿ.ಮೀ ವರೆಗೆ ನಡೆಯಲಿದೆ. ಎರಡನೇ ದಿನವೂ ಬೆಂಗಳೂರಿನಲ್ಲೇ ಮೋದಿ ವಾಸ್ತವ್ಯ ಹೂಡುವರು.

ಮೇ 07 ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮೀಣ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ಮೋದಿ ಪ್ರವಾಸ ನಡೆಸಲಿದ್ದು ಈ ನಾಲ್ಕೂ ಕ್ಷೇತ್ರಗಳಲ್ಲಿ ಸಾರ್ವಜನಿಕ ಬೃಹತ್ ಸಭೆಗಳಲ್ಲಿ ಮೋದಿ ಭಾಷಣ ಮಾಡಲಿದ್ದಾರೆ.

ಬಳಿಕ ಅಂದು ಸಂಜೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದು, ಅಂದು ರಾತ್ರಿ 7ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಮೋದಿ ದೆಹಲಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net