SCO ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಗುಡುಗಿದ ಪ್ರಧಾನಿ ಮೋದಿ: ಮಾನವೀಯತೆಗೆ ಸವಾಲೆಂದ ನಮೋ! PM Modi

PM Modi
Published on

PM Modi : ಕಳೆದ ನಾಲ್ಕು ದಶಕಗಳಿಂದ ಭಾರತ ಭಯೋತ್ಪಾದನೆಯ ಭಾರವನ್ನು ಹೊರುತ್ತಿದೆ. ಇತ್ತೀಚೆಗೆ, ಪಹಲ್ಗಾಮ್‌ನಲ್ಲಿ ಅದರ ಕೆಟ್ಟ ಮುಖವನ್ನು ನಾವೆಲ್ಲರು ನೋಡಿದ್ದೇವೆ. ಈ ದುಃಖದ ಸಮಯದಲ್ಲಿ ನಮ್ಮೊಂದಿಗೆ ನಿಂತ ಸ್ನೇಹಪರ ದೇಶಕ್ಕೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಅಲ್ಲದೆ, ಗಡಿಯಾಚೆಗಿನ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದಕ್ಕೆ ಶೂನ್ಯ ಸಹಿಷ್ಣುತೆಗಾಗಿ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ (SCO) ಶೃಂಗಸಭೆಯಲ್ಲಿ ಭಾಗವಹಿಸಿ, ಪ್ರಧಾನಿ ಮೋದಿ ಮಾತನಾಡಿದರು.

ಎಸ್​ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ. ನಮಗೆ ಭವ್ಯ ಸ್ವಾಗತ ನೀಡಿದ್ದಕ್ಕಾಗಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂದು ಉಜ್ಬೇಕಿಸ್ತಾನ್‌ನ ಸ್ವಾತಂತ್ರ್ಯ ದಿನ. ಈ ಕಾರಣಕ್ಕಾಗಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಸ್​ಸಿಒ ಸದಸ್ಯ ರಾಷ್ಟ್ರವಾಗಿ ಭಾರತವು ಬಹಳ ಪಾಸಿಟಿವ್​ ಪಾತ್ರವನ್ನು ವಹಿಸಿದೆ. ಎಸ್​ಸಿಒಗಾಗಿ ಭಾರತದ ದೃಷ್ಟಿಕೋನ ಮತ್ತು ನೀತಿಯು ಪ್ರಮುಖ 3 ಸ್ತಂಭಗಳನ್ನು ಆಧರಿಸಿದೆ. ಅವುಗಳೆಂದರೆ, S - ಭದ್ರತೆ (Security), C- ಸಂಪರ್ಕ (Connectivity) ಮತ್ತು O - ಅವಕಾಶ (Opportunity) ಎಂದರು.

ಕಳೆದ ನಾಲ್ಕು ದಶಕಗಳಿಂದ ಭಾರತ ಭಯೋತ್ಪಾದನೆಯ ಭಾರವನ್ನು ಹೊರುತ್ತಿದೆ. ಇತ್ತೀಚೆಗೆ, ಪಹಲ್ಗಾಮ್‌ನಲ್ಲಿ ಭಯೋತ್ಪಾದನೆಯ ಕೆಟ್ಟ ಮುಖವನ್ನು ನಾವೆಲ್ಲರು ನೋಡಿದ್ದೇವೆ. ಈ ದಾಳಿಯು ಮಾನವೀಯತೆಯಲ್ಲಿ ನಂಬಿಕೆ ಇಡುವ ಪ್ರತಿಯೊಂದು ದೇಶ ಮತ್ತು ವ್ಯಕ್ತಿಗೆ ಬಹಿರಂಗ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ, ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲ ನೀಡುವುದನ್ನು ನಾವು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಪ್ರತಿಯೊಂದು ರೂಪ ಮತ್ತು ಬಣ್ಣದಲ್ಲೂ ಭಯೋತ್ಪಾದನೆಯನ್ನು ನಾವು ಸರ್ವಾನುಮತದಿಂದ ವಿರೋಧಿಸಬೇಕು. ಏಕೆಂದರೆ, ಇದು ಮಾನವೀಯತೆಯ ಕಡೆಗೆ ನಮ್ಮ ಕರ್ತವ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಯಾವುದೇ ದೇಶದ ಅಭಿವೃದ್ಧಿಯ ಆಧಾರವು ಅದರ ಭದ್ರತೆ, ಶಾಂತಿ ಮತ್ತು ಸ್ಥಿರತೆ ಮೇಲೆ ನಿಂತಿರುತ್ತದೆ. ಆದರೆ, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದ ಈ ಹಾದಿಯಲ್ಲಿ ದೊಡ್ಡ ಸವಾಲುಗಳಾಗಿವೆ. ಭಯೋತ್ಪಾದನೆಯು ಕೇವಲ ಒಂದು ದೇಶದ ಭದ್ರತೆಗೆ ಸವಾಲಲ್ಲ, ಬದಲಾಗಿ ಎಲ್ಲಾ ಮಾನವೀಯತೆಗೆ ಸಾಮಾನ್ಯ ಸವಾಲಾಗಿದೆ. ಯಾವುದೇ ದೇಶ, ಯಾವುದೇ ಸಮಾಜ, ಯಾವುದೇ ನಾಗರಿಕರು ಅದರಿಂದ ಸುರಕ್ಷಿತರಾಗಿ ಇರಲು ಸಾಧ್ಯವಿಲ್ಲ. ಆದ್ದರಿಂದ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಏಕತೆಯನ್ನು ಒತ್ತಿಹೇಳಿದೆ. ಜಂಟಿ ಕಾರ್ಯಾಚರಣೆಯನ್ನು ಮುನ್ನಡೆಸುವ ಮೂಲಕ ಅಲ್ ಖೈದಾ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹೋರಾಡಲು ಭಾರತ ಆಪರೇಷನ್​ ಸಿಂಧೂರ್​ ಉಪಕ್ರಮ ತೆಗೆದುಕೊಂಡಿತು. ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ನಾವು ನಮ್ಮ ಧ್ವನಿ ಎತ್ತಿದ್ದೇವೆ. ಈ ವಿಚಾರದಲ್ಲಿ ನೀವು ನೀಡಿದ ಬೆಂಬಲಕ್ಕಾಗಿ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಮೋದಿ ಹೇಳಿದರು.

ಬಲವಾದ ಸಂಪರ್ಕವು ವ್ಯಾಪಾರವನ್ನು ಹೆಚ್ಚಿಸುವುದಲ್ಲದೆ ಪ್ರತಿಯೊಂದು ದೇಶದ ಬೆಳವಣಿಗೆ ಮತ್ತು ವಿಶ್ವಾಸಕ್ಕೆ ಸದಾ ಬಾಗಿಲು ತೆರೆಯುತ್ತದೆ ಎಂದು ಭಾರತ ಯಾವಾಗಲೂ ನಂಬಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಚಬಹಾರ್ ಬಂದರು ಮತ್ತು ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ನಂತಹ ಉಪಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದೊಂದಿಗೆ ಸಂಪರ್ಕವನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ಭಾರತವು ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಎಂಬ ಮಂತ್ರವನ್ನು ಅನುಸರಿಸಿ ಮುನ್ನಡೆಯುತ್ತಿದೆ. ನಾವು ಪ್ರತಿಯೊಂದು ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದೇವೆ. ಭಾರತದ ಅಭಿವೃದ್ಧಿ ಪ್ರಯಾಣದ ಭಾಗವಾಗಲು ನಿಮ್ಮೆಲ್ಲರನ್ನು ನಾನು ಆಹ್ವಾನಿಸುತ್ತೇನೆ ಎಂದು ಮೋದಿ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net