

ಯುಎಇ: ಫ್ರಾನ್ಸ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಗಲ್ಫ್ ರಾಷ್ಟ್ರವಾದ ಯುನೈಟೆಡ್ ಅರಬ್ ಎಮಿರೇಟ್ಸ್(UAE) ರಾಜಧಾನಿ ಅಬುದಾಬಿಗೆ ಆಗಮಿಸಿದ್ದು, ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಜೊತೆಗೆ ಉಭಯ ದೇಶಗಳ ಕುರಿತಾಗಿ ದ್ವಿಪಕ್ಷೀಯ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದಾರೆ.
ಕಳೆದ ವರ್ಷ ಭಾರತ ಹಾಗೂ ಯುಎಇ ನಡುವೆ ಮಾಡಿಕೊಳ್ಳಲಾಗಿದ್ದ ಆರ್ಥಿಕ ಒಪ್ಪಂದದಿಂದಾಗಿ ಎರಡು ದೇಶಗಳ ನಡುವಿನ ವ್ಯಾಪಾರ ವಹಿವಾಟು ಶೇ 20ರಷ್ಟು ವೃದ್ಧಿಸಿದ್ದು, ಈ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನಮ್ಮ ಗ್ರಹವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಹಲವಾರು ವಿಚಾರಗಳಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ನೀಡಿದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಎರಡು ರಾಷ್ಟ್ರಗಳ ಕರೆನ್ಸಿಗಳು ಸದೃಢ ಆರ್ಥಿಕತೆ ವೃದ್ಧಿಗೆ ಪೂರಕವಾಗಿದ್ದು, ನಮ್ಮ ನಡುವೆ ಮತ್ತಷ್ಟು ವಿಶ್ವಾಸವನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಸಹಕಾರ ಮತ್ತು ನೆರವಿಗೆ ಈ ಪ್ರವಾಸ ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ.