ಆನೆಗಳಿಗೆ ಆಟ, ರೈತರಿಗೆ ಸಂಕಟ

elephant
ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಗ್ರಾಮಗಳಲ್ಲಿ ಕಾಡಾನೆಗಳ ಗುಂಪು ತಿರುಗಾಡುತ್ತಿರುವುದು.
Published on

ಮೂಡಿಗೆರೆ: ಗೋಣಿಬೀಡು ಹೋಬಳಿಯ ಕೆಲ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, 15 ದಿನದ ಹಿಂದೆ ಬೇಲೂರು ಭಾಗದಿಂದ ಬಂದ 16 ಕಾಡಾನೆಗಳನ್ನು ಅರಣ್ಯ ಇಲಾಖೆ ತಂಡ ಶುಕ್ರವಾರ ಸಂಜೆ ಬೇಲೂರಿನ ಅರಣ್ಯಕ್ಕೆ ಓಡಿಸಿದ ಕೆಲ ಹೊತ್ತಿನಲ್ಲೇ 7 ಕಾಡಾನೆಗಳ ಇನ್ನೊಂದು ಗುಂಪು ಬೇಲೂರು ಭಾಗದಿಂದ ತಾಲೂಕಿಗೆ ಪ್ರವೇಶಿಸಿ ಕಸ್ಕೇಬೈಲ್ ಕಾಫಿ ತೋಟದಲ್ಲಿ ಬಿಡುಬಿಟ್ಟಿವೆ.

16 ಕಾಡಾನೆಗಳ ಗುಂಪು 15 ದಿನಗಳಿಂದ ಗೋಣಿಬೀಡು, ಜಿ.ಹೊಸಹಳ್ಳಿ, ಅರೇಹಳ್ಳಿ ಭಾಗದಲ್ಲಿ ತಿರುಗಾಡುತ್ತ ಕಾಫಿ ತೋಟ, ಭತ್ತದ ಗದ್ದೆಯಲ್ಲಿ ಸಸಿ ಮಡಿಗಳನ್ನು ತುಳಿದು ನಾಶಪಡಿಸುತ್ತಿದೆ. ಅರಣ್ಯ ಇಲಾಖೆ ತಂಡ ಆನೆಗಳನ್ನು ಬಂದ ದಾರಿಯಲ್ಲೇ ಓಡಿಸಲು ಹರಸಾಹಸಪಟ್ಟರೂ ಸಾಧ್ಯವಾಗಿರಲಿಲ್ಲ. ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನದಿಂದ ಜಿಲ್ಲೆಯ ಗಡಿ ದಾಟಿಸಿ ಬೇಲೂರಿನ ಅರಣ್ಯ ಭಾಗಕ್ಕೆ ಓಡಿಸಿದರು. ಆನೆಗಳು ಕಾಡನ್ನು ದಾಟುತ್ತಿದ್ದಂತೆ 7 ಕಾಡಾನೆಗಳ ಮತ್ತೊಂದು ಗುಂಪು ಬೇರೊಂದು ಮಾರ್ಗವಾಗಿ ತಾಲೂಕಿಗೆ ಬಂದಿದೆ. ಇದು ಅರಣ್ಯ ಇಲಾಖೆಗೆ ಮತ್ತೊಂದು ತಲೆನೋವು ತಂದಿಟ್ಟಿದೆ.
7 ಕಾಡಾನೆಗಳ ಹೊಸ ಗುಂಪು ಕಾನಹಳ್ಳಿ ಅರಣ್ಯದ ಮೂಲಕ ಬಂದಿದ್ದು, ಶುಕ್ರವಾರ ರಾತ್ರಿ ಚಂದ್ರೇಗೌಡ ಎಂಬುವರ ತೋಟದಲ್ಲಿ ಬೀಡುಬಿಟ್ಟಿದ್ದವು. ಆ ಗುಂಪು ಜಿ.ಹೊಸಳ್ಳಿ, ಹೊಸಪುರ ಗ್ರಾಮದ ಮೂಲಕ ಶನಿವಾರ ಬೆಳಗ್ಗೆ ಕಸ್ಕೇಬೈಲು ಗ್ರಾಮದ ಬಿಳಿಗೌಡ ಎಂಬುವವರ ಕಾಫಿ ತೋಟದಲ್ಲಿ ಕಾಣಿಸಿಕೊಂಡಿತು. ಬಿಳಿಗೌಡರ ಕಾಫಿ ತೋಟದ ಸುತ್ತ ಅರಣ್ಯ ಇಲಾಖೆ ಸಿಬ್ಬಂದಿ ಸುತ್ತುವರಿದು ಕಾವಲು ಕಾಯುತ್ತಿದ್ದಾರೆ.
ತಾಲೂಕಿನಲ್ಲಿ ಬೀಡುಬಿಟ್ಟಿರುವ ಆನೆಗಳು ತೋಟದಿಂದ ಹೊರಟರೆ ಎಲ್ಲಿಗೆ ಹೋಗುತ್ತವೆ ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಕಾಫಿ ತೋಟದ ಪಕ್ಕದಲ್ಲೇ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಇದೆ. ವಾರದ ಕೊನೆಯಲ್ಲಿ ಈ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಕಾಡಾನೆ ಗುಂಪು ರಸ್ತೆ ದಾಟಲು ಮುಂದಾದರೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಲಿದೆ.
ಜನರಲ್ಲಿ ಹೆಚ್ಚಿದ ಭೀತಿ: 7 ಕಾಡಾನೆಗಳು ಕಸ್ಕೆಬೈಲ್ಗೆ ಬಂದಿರುವುದರಿಂದ ಕಮ್ಮರಗೋಡು, ಕಲ್ಲುಗುಡ್ಡ, ಗಾಡಿ ಚೌಕ, ಚಂದ್ರಾಪುರ, ಜಿ.ಹೊಸಹಳ್ಳಿ, ಹೊಸಪುರ ಮತ್ತಿತರ ಗ್ರಾಮದ ಜನರಲ್ಲಿ ಭಯದ ವಾತಾವರಣ ಉಂಟಾಗಿದೆ. ಗುರುವಾರ ಗೋಣಿಬೀಡು, ಶುಕ್ರವಾರ ಮೂಡಿಗೆರೆಯಲ್ಲಿ ವಾರದ ಸಂತೆ ಇರುವುದರಿಂದ ಬಹುತೇಕ ಕಾರ್ಮಿಕರು ಈ ಎರಡೂ ದಿನ ಕೆಲಸಕ್ಕೆ ರಜೆ ಹಾಕುತ್ತಾರೆ. ಶನಿವಾರ ಕಾಡಾನೆ ಕಾಟದಿಂದ ಕಾರ್ಮಿಕರು ಕೆಲಸಕ್ಕೆ ಹೋಗಲಿಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಹಿಂದೇಟು ಹಾಕಿದ್ದಾರೆ. ಇದರಿಂದ ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಸಚಿವರಿಂದ ಪರಿಹಾರ ಸಿಗಲಿ: ಬೇಲೂರು ತಾಲೂಕಿನ ಅರೇಹಳ್ಳಿ ವ್ಯಾಪ್ತಿಯಲ್ಲಿ ಮೀಸಲು ಅರಣ್ಯವಿದೆ. ಅಲ್ಲಿ ಕಾಡಾನೆ ಉಳಿಸಿಕೊಂಡು ಅರಣ್ಯದ ಸುತ್ತ ಟೆಂಟಕಲ್ ಐಬೆಕ್ಸ್ ಬೇಲಿ ಅಥವಾ ಕಂದಕ ನಿರ್ಮಿಸಿದರೆ ಅರಣ್ಯದಿಂದ ಹೊರಗೆ ಕಾಡಾನೆಗಳು ಬರುವುದನ್ನು ತಪ್ಪಿಸಬಹುದು. ಬೇಲೂರು ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಹಿಂಡನ್ನು ಮೂಡಿಗೆರೆ ತಾಲೂಕಿನ ಭಾಗಕ್ಕೆ ಓಡಿಸುತ್ತಿರುವುದರಿಂದ ಈ ಭಾಗದಲ್ಲಿ ಸಂಕಷ್ಟ ಉಂಟಾಗಿದೆ. ಗೋಣಿಬೀಡು ಹೋಬಳಿಯಲ್ಲಿ ಭೈರಾಪುರ ಮೀಸಲು ಅರಣ್ಯ ಹೊರತುಪಡಿಸಿದರೆ ಉಳಿದಂತೆ ಮೀಸಲು ಅರಣ್ಯವಿಲ್ಲ. ಸಂಪೂರ್ಣ ಜನವಸತಿ ಪ್ರದೇಶ ಹಾಗೂ ಕಾಫಿ ತೋಟ, ಭತ್ತದ ಗದ್ದೆ ಹೆಚ್ಚಾಗಿರುವುದರಿಂದ ಕಾಡಾನೆಗಳು ಒಮ್ಮೆಲೆ ತಾಲೂಕಿಗೆ ಲಗ್ಗೆಯಿಟ್ಟರೆ ಸಾರ್ವಜನಿಕರ ಆಸ್ತಿಪಾಸ್ತಿ ಸಂಪೂರ್ಣ ನಾಶವಾಗಲಿದೆ. ಈ ಬಗ್ಗೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿ ಸಚಿವರು ಚರ್ಚಿಸಿ ಕಾಡಾನೆ ಹಾವಳಿ ನಿಯಂತ್ರಿಸಬೇಕಿದೆ.
16 ಕಾಡಾನೆಗಳನ್ನು 15 ದಿನದ ಕಾರ್ಯಾಚರಣೆಯಲ್ಲಿ ಶುಕ್ರವಾರ ವಾಪಸ್ ಅಟ್ಟಲಾಗಿದೆ. ಈ ಗುಂಪು ಕಾಡಿನ ಕಡೆಗೆ ಹೋಗುತ್ತಿದ್ದಂತೆ 7 ಕಾಡಾನೆಗಳ ಇನ್ನೊಂದು ಗುಂಪು ಬೇಲೂರು ಭಾಗದಿಂದ ಇಲ್ಲಿಗೆ ಬಂದಿದೆ. ಶನಿವಾರ ಬೆಳಗ್ಗೆ ಕಸ್ಕೆಬೈಲ್ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ. 7 ಆನೆಗಳನ್ನು ಬಂದ ದಾರಿಯಲ್ಲಿ ವಾಪಸ್ ಓಡಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ಎಆರ್‌ಎಫ್‌ಒ ಶಿವಕುಮಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net