

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಒಟ್ಟಾಗಿ ಹೋರಾಡಲು ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳ ರಾಜ್ಯ ಘಟಕದ ಮುಖಂಡರು ನಿರ್ಣಯಿಸಿದ್ದಾರೆ.
ಇದನ್ನೂ ಓದಿ: ಗುರಿಮೀರಿ ಠೇವಣಿ ಸಂಗ್ರಹ
ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಎಂ.ಸಿ ಸುಧಾಕರ್, ಆಪ್ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಪೃಥ್ವಿರೆಡ್ಡಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಬಸವರಾಜು, ಎನ್ ಸಿಪಿ ರಾಜ್ಯಾಧ್ಯಕ್ಷ ಸಿ ಎಸ್ ಇನಾಂದಾರ್, ಸಿಪಿಐ ಎಂಎಲ್ ಪ್ರಧಾನ ಕಾರ್ಯದರ್ಶಿ ಕ್ಲಿಪ್ಟನ್ ಡಿ ರೊಜೆರಿಯೋ, ರಾಷ್ಟ್ರೀಯ ಜನತಾದಳ ರಾಜ್ಯಾಧ್ಯಕ್ಷ ಯಾಕುಬ್ ಗುಲ್ವಾಡಿ, ಫಾರ್ವರ್ಡ್ ಬ್ಲಾಕ್ ರಾಜ್ಯಾಧ್ಯಕ್ಷ ಶಿವಶಂಕರ್ ಮತ್ತಿತರರು ಭಾಗವಹಿಸಿದ್ದರು.
ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ನಾಯಕರು, ತಮ್ಮ ಮುಂದಿನ ನಡೆಯ ಬಗ್ಗೆ ತಿಳಿಸಿದರು. ಡಿ.ಕೆ. ಶಿವಕುಮಾರ್ ಮಾತನಾಡಿ, ದೇಶಕ್ಕೆ ಬದಲಾವಣೆ ಎಂದು ಅನಿವಾರ್ಯ ಎಂದು ಇಂಡಿಯಾ ಒಕ್ಕೂಟ ಬೆಂಗಳೂರಲ್ಲೇ ಜನ್ಮತಾಳಿ ದೊಡ್ಡ ಸಂದೇಶ ನೀಡಿತು. ಬಳಿಕ ಅನೇಕ ಚುನಾವಣೆ ನಡೆಯಿತು. ಕೆಲವು ಸೋತೆವು, ಕೆಲವು ಗೆದ್ದೆವು ಎಂದರು.
ಈಗ ಮತ್ತೆ ಚುನಾವಣೆ ಬಂದಿದೆ. ಹತ್ತು ಪಕ್ಷಗಳು ಒಟ್ಟಿಗೆ ಸೇರಿ ಚರ್ಚೆ ಮಾಡಿದ್ದೇವೆ. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಅವರ ನಂಬರ್ ಮುಖ್ಯವಲ್ಲ, ಅವರದೇ ತತ್ವ ಸಿದ್ಧಾಂತದಡಿ ಪಕ್ಷ ಕಟ್ಟಿಕೊಂಡು ಬಂದಿದ್ದಾರೆ. ಎನ್ ಡಿಎ ಸೋಲಿಸುವುದೇ ಒಂದು ಗುರಿ ಎಂದು ಒಟ್ಟಾಗಿ ಬಂದಿದ್ದೇವೆ ಎಂದರು.
ದೇಶದಿಂದಲೇ ಎನ್‌ಡಿಎ ಕಿತ್ತೊಗೆಯಲು "ಕೋಮುವಾದಿ ಸರ್ವಾಧಿಕಾರ ವರ್ಸಸ್ ಪ್ರಜಾಪ್ರಭುತ್ವ" ನಮ್ಮ ಲೀಡ್ ಲೈನ್. ಪ್ರಜಾಪ್ರಭುತ್ವ ರಕ್ಷಣೆಗಾಗಿ ನಾವೆಲ್ಲ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿದ ಅವರು ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಒಗ್ಗಟ್ಟಾಗಿ ಕೆಲಸ ಮಾಡಲಿದ್ದು, ಸಮನ್ವಯ ಸಮಿತಿ ರಚಿಸಲಾಗುತ್ತದೆ. ತಂತ್ರಗಾರಿಕೆ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ದೇಶ ಇಕ್ಕಟ್ಟು ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ದೇಶದಲ್ಲಿ ಯಾರಿಗೆ ಭಯ ಇಲ್ಲ ಎಂದು ಹುಡುಕಬೇಕಾಗಿದೆ. ಎಲ್ಲರೂ ಒಗ್ಗಟ್ಟಾಗಿ 28 ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದರು.