ಇಂದು ಆಗಸದಲ್ಲಿ ನಡೆಯಲಿದೆ ವಿಸ್ಮಯ: ತಪ್ಪದೇ ಕಣ್ತುಂಬಿಕೊಳ್ಳಿ, ಮಿಸ್​ ಆದ್ರೆ 2040ರವರೆಗೆ ಕಾಯ್ಬೇಕಾಗುತ್ತೆ! Planetary Parade

Planetary Parade
Published on

Planetary Parade : ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವ ಎಂದೇ ಖ್ಯಾತಿ ಪಡೆದಿರುವ ಮಹಾ ಕುಂಭಮೇಳ ಮೊನ್ನೆಯಷ್ಟೇ (ಫೆ.26) ಅಂತ್ಯಗೊಂಡಿದೆ. ಈ ಮಹಾ ಉತ್ಸವದ ಬೆನ್ನಲ್ಲೇ ಮತ್ತೊಂದು ಅದ್ಭುತ ಕ್ಷಣ ಇಂದು ಆಗಸದಲ್ಲಿ ನಡೆಯಲಿದೆ. ಇದೊಂದು ಖಗೋಳ ವಿಸ್ಮಯವಾಗಿದ್ದು, ಇಂದು ಮಿಸ್​ ಮಾಡಿದರೆ, ಅದನ್ನು ಮತ್ತೆ ಕಣ್ತುಂಬಿಕೊಳ್ಳಲು 2040ರವರಗೆ ಕಾಯಬೇಕಾಗುತ್ತದೆ.

ಹೌದು, ಫೆಬ್ರವರಿ 28 ಅಂದರೆ ಇಂದು ಸೌರವ್ಯೂಹದ ಏಳು ಗ್ರಹಗಳು ರಾತ್ರಿ ಆಗಸದಲ್ಲಿ ಏಕಕಾಲದಲ್ಲಿ ಗೋಚರಿಸುವ ಅಪರೂಪದ ದೃಶ್ಯವನ್ನು ನೀವು ವೀಕ್ಷಿಸಬಹುದಾಗಿದೆ. ಸೂರ್ಯನ ಸುತ್ತ ಸುತ್ತುವ ಏಳು ಗ್ರಹಗಳು (ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್) ಒಂದೇ ನೇರ ರೇಖೆಯಲ್ಲಿ ಬರಲಿವೆ. ಗಮನಾರ್ಹ ಸಂಗತಿ ಏನೆಂದರೆ, ಈ ಖಗೋಳ ವಿಸ್ಮಯ ರಾತ್ರಿಯಲ್ಲಿ ಭಾರತದಿಂದಲೂ ಗೋಚರಿಸುತ್ತದೆ.

ಈ ಗ್ರಹಗಳ ಸಂಯೋಜನೆಯು ಅಂತ್ಯಗೊಂಡ ಮಹಾ ಕುಂಭಮೇಳಕ್ಕೆ ಮತ್ತೊಂದು ವಿಶೇಷತೆಯನ್ನು ತಂದುಕೊಟ್ಟಿದೆ ಎಂದು ವಿದ್ವಾಂಸರು ನಂಬಿದ್ದಾರೆ. ಖಗೋಳ ವಿದ್ಯಮಾನ ಮತ್ತು ಆಧ್ಯಾತ್ಮಿಕ ಶಕ್ತಿಗಳ ನಡುವಿನ ಸಂಪರ್ಕವನ್ನು ನಂಬುವವರಿಗೆ ಈ ಒಂದು ಖಗೋಳ ವಿಸ್ಮಯ ಮಹತ್ವದ ಘಟನೆಯಾಗಲಿದೆ ಎಂದರೆ ತಪ್ಪಾಗಲಾರದು.

ಅಂದಹಾಗೆ ಗ್ರಹಗಳ ಈ ಮೆರವಣಿಗೆಯು ಕಳೆದ ಜನವರಿ ತಿಂಗಳಲ್ಲೇ ಆರಂಭವಾಯಿತು. ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್‌ ಮಾತ್ರ ಕಾಣಿಸಿಕೊಂಡಿತ್ತು. ಆದರೆ, ಈ ಗುಂಪಿಗೆ ಇಂದು ಬುಧ ಗ್ರಹ ಎಂಟ್ರಿಯಾಗಲಿದೆ. ಈ ಅದ್ಭುತ ಸಂಯೋಜನೆಯೂ ಇಂದು (ಫೆ. 28) ಗೋಚರಿಸುತ್ತದೆ. ಈ ಗ್ರಹಗಳು ಸೂರ್ಯನ ಮಾರ್ಗವನ್ನು ಸೂಚಿಸುವ ಗ್ರಹಣದ ಉದ್ದಕ್ಕೂ ಒಂದೇ ಸಾಲಿನಲ್ಲಿ ಗೋಚರಿಸುತ್ತವೆ. ಈ ವೇಳೆ ಅದ್ಭುತವಾದ ಗ್ರಹಗಳ ಮೆರವಣಿಗೆಯನ್ನು ನೀವು ಕಾಣಬಹುದು.

ಐದು ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಯನ್ನು ಬರಿಗಣ್ಣಿನಿಂದ ಬಹಳ ಸ್ಪಷ್ಟವಾಗಿ ಕಾಣಬಹುದು. ಆದಾಗ್ಯೂ, ಯುರೇನಸ್ ಮತ್ತು ನೆಪ್ಚೂನ್ ತುಂಬಾ ದುರ್ಬಲ ಗ್ರಹಗಳಾಗಿರುವುದರಿಂದ, ಅವುಗಳನ್ನು ನೋಡಲು ಬೈನಾಕ್ಯುಲರ್‌ಗಳು ಅಥವಾ ದೂರದರ್ಶಕ ಅಗತ್ಯವಿದೆ.

ಸಂಜೆ ಸೂರ್ಯಾಸ್ತದ ನಂತರದಿಂದ ಬೆಳಿಗ್ಗೆ ಸೂರ್ಯೋದಯದ ಮೊದಲು ವೀಕ್ಷಣೆಗೆ ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ, ಗ್ರಹಗಳು ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಅಪರೂಪದ ಆಕಾಶ ಘಟನೆಯು ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕುವುದಲ್ಲದೆ, ಮಹಾ ಕುಂಭಮೇಳದ ಬೆನ್ನಲ್ಲೇ ಸಂಭವಿಸುತ್ತಿರುವುದರಿಂದ ಇದು ತುಂಬಾ ವಿಶೇಷವಾಗಿದೆ. ಖಗೋಳಶಾಸ್ತ್ರ ಪ್ರಿಯರು, ಆಧ್ಯಾತ್ಮಿಕ ಅನ್ವೇಷಕರು ಮತ್ತು ಸಾರ್ವಜನಿಕರು ಸಹ ಈ ಭವ್ಯವಾದ ಗ್ರಹಗಳ ಸಂಯೋಜನೆಯನ್ನು ವೀಕ್ಷಿಸಿ ಆನಂದಿಸಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net