ಸೇತುವೆ ಅಡಿ ಸಿಲುಕಿಕೊಂಡ ವಿಮಾನ; ವಿಡಿಯೋ ವೈರಲ್

Bihar Bridge
Published on

ಪಟ್ನಾ: ಭಾರತದ ರಸ್ತೆಗಳಲ್ಲಿ ಗುಂಡಿ ಸಮಸ್ಯೆಯಿಂದ ವಾಹನ ಚಾಲನೆ ಬಲು ಕಷ್ಟಕರವಾಗಿದ್ದು, ಬೃಹತ್ ಸಂಖ್ಯೆಯ ವಾಹನಗಳಿಗೆ ರಸ್ತೆಗಳಲ್ಲಿ ಜಾಗ ಸಾಲುತ್ತಿಲ್ಲ. ಆದರೆ, ಖಾಲಿ ಮಾರ್ಗದಲ್ಲಿ ಓಡಾಡಬೇಕಾದ ವಿಮಾನವೂ ಕೆಳಗೆ ಇಳಿದು ರಸ್ತೆಗೆ ಬಂದರೆ ಏನಾಗಬಹುದೆಂದು ಒಮ್ಮೆ ಯೋಚಿಸಿ. ಇದೀಗ ಇದೇ ರೀತಿಯ ಘಟನೆಯೊಂದು ಬಿಹಾರದ ಮೋತಿಹಾ​ರಿಯಲ್ಲಿ ನಡೆದಿದೆ.

ವಿಮಾನದ ದೇಹದ ಭಾಗವು ಸೇತುವೆಯೊಂದರ ಅಡಿ ಸಿಲುಕಿಕೊಂಡು ಅವಾಂತರ ಉಂಟಾಗಿದೆ. ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವೈರಲ್​ ಆಘಿರುವ ವಿಡಿಯೋದಲ್ಲಿ ವಿಪರೀತ ಜನದಟ್ಟಣೆಯ ಜತೆಗೆ, ವಾಹನಗಳಿಗೆ ಮುಂದೆ ಸಾಗಲು ಜಾಗವಿಲ್ಲದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿರುವುದನ್ನು ನೋಡಬಹುದಾಗಿದೆ. ವಿಮಾನವನ್ನು ಸೇತುವೆ ಅಡಿಯಿಂದ ಅಪಾಯವಾಗದಂತೆ ತೆರವುಗೊಳಿಸಿ, ಬಿಹಾರದಿಂದ ಅಸ್ಸಾಂ ಕಡೆಗೆ ಮುಕ್ತಿಗೊಳಿಸಲಾಯಿತು.

ಅಂದಹಾಗೆ, ಇದು ಆಕಾಶದಲ್ಲಿ ಹಾರಾಡುವ ವಿಮಾನ, ರಸ್ತೆಯಲ್ಲಿ ಹೋಗುವ ಬಯಕೆಯಿಂದ ಕೆಳಗೆ ಇಳಿದು ಬಂದಿರುವುದಲ್ಲ. ಸಾಕಷ್ಟು ವರ್ಷ ಹಾರಾಡಿ ಹಾರಾಡಿ ಹೈರಾಣಾದ ಬಳಿಕ ನಿವೃತ್ತಿ ತೆಗೆದುಕೊಂಡಿದ್ದ ವಿಮಾನವನ್ನು ಗುಜರಿಗೆ ಹಾಕಲು ಅಸ್ಸಾಂನತ್ತ ಸಾಗಿಸಲಾಗುತ್ತಿತ್ತು. ಕಾರ್ಯಾಚರಣೆ ನಿಲ್ಲಿಸಿದ್ದ ವಿಮಾನವನ್ನು ಗುಜರಿಗೆ ಹಾಕುವ ಸಲುವಾಗಿ ಮುಂಬಯಿನಿಂದ ಅಸ್ಸಾಂಗೆ ಸಾಗಿಸಲಾಗುತ್ತಿತ್ತು. ಈ ವಿಮಾನದ ದೇಹವು ಶುಕ್ರವಾರ ಬೆಳಿಗ್ಗೆ ಬಿಹಾರದ ಮೋತಿಹಾರಿಯ ಪಿಪ್ರಾಕೋಥಿ ಸೇತುವೆಯ ಅಡಿ ಸಿಲುಕಿಕೊಂಡ ಸುದ್ದಿ ಕ್ಷಣಾರ್ಧದಲ್ಲೇ ಕಾಳ್ಗಿಚ್ಚಿನಂತೆ ಹರಡಿದೆ.

ಜೀವಮಾನದಲ್ಲಿ ವಿಮಾನವನ್ನು ಅಷ್ಟು ಹತ್ತಿರದಿಂದ ನೋಡದವರು, ಇಂತಹದ್ದೊಂದು ಅಪೂರ್ವ ಅವಕಾಶ ಬಿಡುವುದು ಹೇಗೆ ಎಂದು ನೂರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಟ್ರಕ್ ಚಾಲಕರು ಮತ್ತು ಸ್ಥಳೀಯ ಜನರ ಸಹಾಯದೊಂದಿಗೆ ಈ ಗುಜರಿ ವಿಮಾನವನ್ನು ಕೊನೆಗೂ ಹೊರ ತೆಗೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ರಸ್ತೆಯಲ್ಲಿ ಸಾಗಿಸಲಾಗುತ್ತಿದ್ದ ವಿಮಾನವು, ಅಂಡರ್‌ಪಾಸ್ ಒಂದರಲ್ಲಿ ಸಿಲುಕಿಕೊಂಡಿತ್ತು. ಟ್ರಕ್ ಒಂದರ ಟ್ರೈಲರ್‌ನಲ್ಲಿ ಕೊಚ್ಚಿಯಿಂದ ಹೈದರಾಬಾದ್‌ಗೆ ವಿಮಾನವನ್ನು ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಹೈದರಾಬಾದ್ ಮೂಲದ ಜನಪ್ರಿಯ ರೆಸ್ಟೋರೆಂಟ್ ಪಿಸ್ತಾ ಹೌಸ್‌ನ ಮಾಲೀಕ, ಕೇರಳದಲ್ಲಿ ನಡೆದಿದ್ದ ಹರಾಜಿನಲ್ಲಿ ಆ ವಿಮಾನವನ್ನು ಖರೀದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net