

ವಯನಾಡು: ಭೀಕರ ಭೂಕುಸಿತದಲ್ಲಿ ಕೇರಳದ ವಯನಾಡು ಜಿಲ್ಲೆಯ ಮೂರು ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿ ಆಗಸ್ಟ್ 30ಕ್ಕೆ ಸರಿಯಾಗಿ ಒಂದು ತಿಂಗಳು ಸಂದಿದೆ. ಅಲ್ಲಿನ ಪೋಸ್ಟ್ ಆಫೀಸ್ನಲ್ಲಿ ಮೃತರು ಮತ್ತು ನಾಪತ್ತೆಯಾದವರಿಗೆ ಬಂದಿದ್ದ ಅಂಚೆ ಹಾಗೂ ಪಾರ್ಸಲ್ಗಳು ಡೆಲಿವರಿಯಾಗದೆ ಹಾಗೇ ರಾಶಿಯಾಗಿ ಬಿದ್ದಿರುವುದು, ‘ಸೆಲ್ಪಿ ಪ್ರವಾಸಿ’ಗಳಿಗೆ ಪೊಲೀಸರ ತಡೆ ಮತ್ತು ನಿರ್ಜನವಾಗಿರುವ ಮನೆಗಳಿಂದ ಕಳ್ಳತನವಾಗುವುದನ್ನು ತಡೆಯಲು ಪೊಲೀಸರ ಪಹರೆ ಇವು ಈ ಮೂರು ಗ್ರಾಮಗಳಲ್ಲಿ ಈಗ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯಗಳಾಗಿವೆ. ಜುಲೈ 30ರಂದು ಸಂಭವಿಸಿದ ಕನಿಷ್ಠ ಎರಡು ಭಾರಿ ಭೂಕುಸಿತ ಪ್ರಕರಣಗಳಲ್ಲಿ ಪುಂಚಿರಿಮಟ್ಟಂ, ಚೂರಲ್ವಾಲಾ ಮತ್ತು ಮುಂಡಕ್ಕೆ ೖ ಗ್ರಾಮಗಳು ಉಧ್ವಸ್ಥಗೊಂಡಿದ್ದವು.
ಆ ದಿನ ಮುಂಜಾನೆ 2 ಗಂಟೆ ಸುಮಾರಿಗೆ ಅಗಾಧ ಪ್ರಮಾಣದ ನೀರಿನ ಹರಿವಿನ ಜತೆ ಧರೆ ಜರಿದು ನಿದ್ರಾದೇವಿಯ ಮಡಿಲಲ್ಲಿದ್ದ ಜನರು ಏನಾಯಿತೆಂದು ಚಿಂತಿಸುವ ಮೊದಲೇ ಅನಾಹುತ ಘಟಿಸಿತ್ತು. ಈ ಪ್ರಕೃತಿ ವಿಕೋಪಕ್ಕೆ 230ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಮಾನವ ದೇಹದ ಸುಮಾರು 218 ನಾನಾ ಭಾಗಗಳು ಪತ್ತೆಯಾಗಿವೆ. ಆ ಪೈಕಿ 178 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ. 17 ಕುಟುಂಬಗಳಲ್ಲಿ ಒಬ್ಬರೂ ಬದುಕಿಲ್ಲ, ಅಂಥವರ ಸಂಖ್ಯೆ 58 ಎಂದು ಇತ್ತೀಚಿನ ಅಧಿಕೃತ ಅಂಕಿ-ಅಂಶ ಹೇಳಿದೆ. ರಾಜ್ಯ ರಾಜಧಾನಿ ತಿರುವನಂತಪುರಂನಿಂದ 470 ಕಿ.ಮೀ. ದೂರದಲ್ಲಿರುವ ಗುಡ್ಡಗಾಡು ಜಿಲ್ಲೆ ವಯನಾಡಿನ ನಯನ ಮನೋಹರವಾದ ಈ ಗ್ರಾಮಗಳು ಹ್ರದಯವಿದ್ರಾವಕ ದುರಂತಕ್ಕೆ ಒಳಗಾಗಿದ್ದವು. ಇನ್ನೂ ಮಳೆ ಆಗುತ್ತಿರುವುದರಿಂದ ಏನಾದರೂ ತುರ್ತು ಸಂದರ್ಭಕ್ಕೆ ಅಗತ್ಯವಾದೀತೆಂಬ ನಿರೀಕ್ಷೆಯಿಂದ ಅಲ್ಲಿ ಪೊಲೀಸ್ ವಾಹನಗಳು, ಮಣ್ಣೆತ್ತುವ ಬೃಹತ್ ಯಂತ್ರಗಳು, ಆಂಬುಲೆನ್ಸ್ಗಳು ಮತ್ತು ಪರಿಹಾರ ತಂಡಗಳ ವಾಹನಗಳು ಸಾಲುಗಟ್ಟಿ ನಿಂತಿರುವುದು ಅದಕ್ಕೆ ಸಾಕ್ಷಿಯಾಗಿ ನಿಂತಿವೆ.
ಸಂತ್ರಸ್ತರಿಗಾಗಿ ಎರಡು ಟೌನ್ಷಿಪ್: ವಯನಾಡು ಭೂಕುಸಿತಕ್ಕೆ ಸಿಲುಕಿ ಬದುಕುಳಿದ ಸಂತ್ರಸ್ತರು ಸಮುದಾಯ ಜೀವನಶೈಲಿಯಲ್ಲಿ ಜೀವಿಸುವಂತೆ ಮಾಡಲು ಎರಡು ಟೌನ್ಷಿಪ್ಗಳ ನಿರ್ವಣಕ್ಕೆ ಸ್ಥಳ ನಿಗದಿ ಪಡಿಸಲಾಗಿದೆ ಎಂದು ಕೇರಳ ಸಚಿವ ಕೆ.ರಾಜನ್ ಶುಕ್ರವಾರ ತಿಳಿಸಿದ್ದಾರೆ. ದುರಂತ ಸ್ಥಳದಿಂದ 11 ಕಿ.ಮೀ. ದೂರದ ಕೊಟ್ಟಪ್ಪಾಡಿ ಮತ್ತು ವಯನಾಡಿನ ಜಿಲ್ಲಾ ಕೇಂದ್ರ ಕಲ್ಪೆಟ್ಟ ಎಂಬಲ್ಲಿ 2 ಸ್ಥಳಗಳನ್ನು ಗುರುತಿಸಲಾಗಿದ್ದು, ಸಂತ್ರಸ್ತ ಎಲ್ಲರಿಗೂ ಅಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.