

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲು ಸೇರಿರುವ ನಟ ದರ್ಶನ್ಗೆ ದಿನ ಕಳೆದಂತೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದ್ದು, ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈ ಬಗ್ಗೆ ನಟ-ನಟಿಯರು ಹಾಗೂ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕನಸಿನ ರಾಣಿ ಮಾಲಾಶ್ರೀ, ನನಗೆ ಗೊತ್ತಿರುವ ಹಾಗೆ ದರ್ಶನ್ ಅವರದ್ದು ಒಳ್ಳೆಯ ವ್ಯಕ್ತಿತ್ವ. ಅವರೊಬ್ಬ ಜೆಂಟಲ್ಮ್ಯಾನ್. ದರ್ಶನ್ ಅವರು ಕಾಟೇರ ಚಿತ್ರದ ಮೂಲಕ ನನ್ನ ಮಗಳನ್ನು ಇಂಡಸ್ಟ್ರಿಗೆ ಪರಿಚಯಿಸಿದರು. ಇದಕ್ಕೆ ನಾನು ನನ್ನ ಮಗಳು ಆರಾಧನ ಅವರಿಗೆ ಚಿರಋಣಿಯಾಗಿ ಇರುತ್ತೀವಿ. ದರ್ಶನ್ ನಮ್ಮನ್ನು ಕಾಟೇರ ಸೆಟ್ನಲ್ಲಿ ನೋಡಿಕೊಳ್ಳುತ್ತಿದ್ದ ರೀತಿ, ಅವರು ನಮಗೆ ತೋರಿಸುತ್ತಿದ್ದ ಪ್ರೀತಿ ನಿಜಕ್ಕೂ ಆರಾಧನ ಅವರ ಮೂಲಕ ಬಂದಿದ್ದು ನಮಗೆ ಖುಷಿ ಆಗುತ್ತೆ. ನಾವು ನೋಡಿದ ದರ್ಶನ ಬೇರೆ ಅವರ ಪ್ರೀತಿ ಅಂಥದ್ದು.
ರಾಮು ನಿರ್ಮಾಣ ಮಾಡಿದ್ದ ‘ಕಲಾಸಿಪಾಳ್ಯ’ ಸಿನಿಮಾದಿಂದ ನನಗೆ ದರ್ಶನ್ ಪರಿಚಯ. ಅವರು ತುಂಬ ವಿನಯವಂತ ವ್ಯಕ್ತಿ. ಕಾಟೇರ ಸಮಯದಲ್ಲೂ ಹಾಗೆಯೇ ಇದ್ದರು. ಯಾವುದೇ ಬದಲಾವಣೆ ಇರಲಿಲ್ಲ. ಕಾಟೇರ ಸಿನಿಮಾದಲ್ಲಿ ಆರಾಧನಾಗೆ ಅವರು ಸಾಕಷ್ಟು ಹೇಳಿಕೊಟ್ಟಿದ್ದಾರೆ. ಸೆಟ್ಗೆ ಹೋದಾಗ ನನ್ನನ್ನೂ ಅಮ್ಮ ಅಂತ ಮಾತನಾಡಿಸುತ್ತಿದ್ದರು.
ಈಗ ನಡೆದಿರುವ ಘಟನೆ ಬಗ್ಗೆ ನಿಜಕ್ಕೂ ನನಗೆ ಏನ್ ಮಾತಾಡಬೇಕು ಎಂದು ಗೊತ್ತಾಗುತ್ತಿಲ್ಲ. ನಾನು ನ್ಯಾಯ ಮತ್ತು ದೇವರನ್ನ ನಂಬುತ್ತೇನೆ. ಅವರಿಗೆ ನಿಜಕ್ಕೂ ಒಳ್ಳೆಯದಾಗುತ್ತೆ. ವಿಜಯಲಕ್ಷ್ಮೀ ನಿಜಕ್ಕೂ ಸ್ಟ್ರಾಂಗ್ ವುಮೆನ್ ಸಾಕಷ್ಟು ಏಳು- ಬೀಳನ್ನ ಅವರು ಜೀವನದಲ್ಲಿ ನೋಡಿದ್ದಾರೆ. ಅವರಿಗೂ ಒಳ್ಳೆಯದಾಗುತ್ತೆ.
ದರ್ಶನ್ ದುಡುಕಿನಿಂದ ಈ ಪ್ರಕರಣ ಆಯ್ತಾ ಎಂಬುದಕ್ಕೆ ನನ್ನ ಬಳಿ ಉತ್ತರ ಇಲ್ಲ. ನನಗೆ ಗೊತ್ತಿರುವ ದರ್ಶನ್ ಅವರ ಸ್ವಭಾವವೇ ಬೇರೆ. ಅಭಿಮಾನಿಗಳು ದರ್ಶನ್ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೋ ನಾನು ಮತ್ತು ಆರಾಧನಾ ಕೂಡ ಅಷ್ಟೇ ಪ್ರೀತಿ-ಅಭಿಮಾನ ಇಟ್ಟುಕೊಂಡಿದ್ದೇವೆ. ಅದರಲ್ಲಿ ಅನುಮಾನವೇ ಇಲ್ಲ ಎಂದು ನಟಿ ಮಾಲಾಶ್ರೀ ರೇಣುಕಸ್ವಾಮಿ ಹತ್ಯೆ ಪ್ರಕರಣದ ಕುರಿತು ಮಾತನಾಡಿದ್ದಾರೆ.