ಬೆಂಗಳೂರಿನ ನಿವಾಸಿ ಸೂರಿ ಪಾಯಲ ಎಂಬವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಈ ಬಗ್ಗೆ ತನ್ನ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 4ಕ್ಕೆ ನಿಗದಿಯಾಗಿದೆ.
ರಾಜ್ಯ ಸರ್ಕಾರವು ಸುಮಾರು 42 ಮಂದಿಯನ್ನು ವಿವಿಧ ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ನೇಮಕಾತಿಗಳ ಜೊತೆಗೆ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ, ಸವಲತ್ತುಗಳು ಮತ್ತು ಭತ್ಯೆಗಳನ್ನು ನೀಡಲಾಗಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಅರ್ಜಿಯಲ್ಲಿರುವ ಪ್ರಮುಖ ಆಕ್ಷೇಪಗಳು
ಸಂವಿಧಾನದ 164(1ಎ) ವಿಧಿಯ ಪ್ರಕಾರ, ರಾಜ್ಯದ ಒಟ್ಟು ಶಾಸಕರ ಸಂಖ್ಯೆಯ ಶೇ. 15ಕ್ಕಿಂತ ಹೆಚ್ಚು ಜನರನ್ನು ಸಚಿವರನ್ನಾಗಿ ಮಾಡುವಂತಿಲ್ಲ. ಕರ್ನಾಟಕದಲ್ಲಿ ಈ ಮಿತಿ 34 ಸಚಿವರಿಗೆ ಮಾತ್ರ ಇದೆ. ಆದರೆ, ಒಟ್ಟು 42 ಮಂದಿಗೆ ಸಚಿವ ದರ್ಜೆಯ ಸ್ಥಾನ ನೀಡಿರುವುದು ಈ ಮಿತಿಯ ಉಲ್ಲಂಘನೆಯಾಗಿದೆ.
ಸಚಿವರಲ್ಲದವರಿಗೆ ‘ಕರ್ನಾಟಕ ಸಚಿವರ ಸಂಬಳ ಮತ್ತು ಭತ್ಯೆಗಳ ಕಾಯ್ದೆ ’ ಅಡಿಯಲ್ಲಿ ಸವಲತ್ತುಗಳನ್ನು ನೀಡುತ್ತಿರುವುದು ಕಾನೂನುಬಾಹಿರ. ಸರ್ಕಾರದ ಈ ಕ್ರಮದಿಂದ ಸಾರ್ವಜನಿಕರ ಹಣ ಅನಗತ್ಯವಾಗಿ ಪೋಲಾಗುತ್ತಿದೆ.
ಶಾಸಕರು ಇಂತಹ ಹುದ್ದೆಗಳನ್ನು ಅಲಂಕರಿಸಿ ಅಧಿಕೃತ ವಾಹನ, ವಸತಿ ಮತ್ತು ಭತ್ಯೆಗಳನ್ನು ಪಡೆಯುವುದು ‘ಲಾಭದಾಯಕ ಹುದ್ದೆ’ ಅಡಿಯಲ್ಲಿ ಬರುತ್ತದೆ, ಇದು ಅವರ ಶಾಸಕ ಸ್ಥಾನಕ್ಕೆ ಅನರ್ಹತೆ ತರಬಲ್ಲದು.