

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದೆ. ಈಗಾಗಲೇ ಅಂಚೆ ಮತದಾನ ಆರಂಭವಾಗಿದೆ. ಇದೀಗ ಯೋಧರೊಬ್ಬರು ಅಂಚೆ ಮತದಾನದ ಮೂಲಕ ಎಡವಟ್ಟು ಮಾಡಿಕೊಂಡಿದ್ದು, ಚುನಾವಣಾ ಅಧಿಕಾರಿಗಳು ತನಿಖೆ ನಡೆಸುವಂತಾಗಿದೆ.
ಯೋಧಯೊರಬ್ಬರು ಮತಪತ್ರದ ಮೂಲಕ ಮತದಾನ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಮತಪತ್ರದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಫೋಟೋದಲ್ಲಿ ಯೋಧ ಸಾ.ರಾ.ಮಹೇಶ್ ಅವರಿಗೆ ಮತ ಹಾಕಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ.
ಯೋಧ ಮತ ಹಾಕಿರುವ ಫೋಟೋವನ್ನು ಬಳಸಿಕೊಂಡು ಸಾ.ರಾ.ಮಹೇಶ್ ಅಭಿಮಾನಿಗಳು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ನಮ್ಮ 'ಸಾ.ರಾ.ಬಾಸ್'ಗೆ ಮೊದಲ ಮತ ನಮ್ಮ ದೇಶ ಕಾಯುವ ಸೈನಿಕನಿಂದ. ಜೈಹಿಂದ್ ಎಂದು ಬರೆದುಕೊಂಡಿದ್ದಾರೆ.
ಕೆ.ಆರ್.ನಗರ ಕ್ಷೇತ್ರದ ಮತದಾರನಾಗಿರುವ ಯೋಧ, ಹೊರ ರಾಜ್ಯದಿಂದ ಅಂಚೆ ಮತದಾನ ಮಾಡಿರುವುದು ಸದ್ಯ ಬೆಳಕಿಗೆ ಬಂದಿದೆ. ಸದ್ಯ ಯೋಧ ಎಲ್ಲಿಂದ ಮತದಾನ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡುವಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ನಿರತರಾಗಿದ್ದಾರೆ.