

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 2020ನೇ ಸಾಲಿನ ಎಂಬಿಎ, ಎಂಸಿಎ, ಎಂ.ಎ, ಎಂ.ಟೆಕ್, ಎಂ.ಆರ್ಕ್ ಕೋರ್ಸ್ಗಳ ಪ್ರವೇಶಾತಿಗಾಗಿ ಪಿಜಿಸಿಇಟಿ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದೆ. ಆಗಸ್ಟ್ 8, 9ರಂದು ಪರೀಕ್ಷೆಗಳು ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಜೂ.15 ರಿಂದ 28ರವರೆಗೆ ಆನ್ಲೈನ್ನಲ್ಲಿ ಅರ್ಜಿ ದಾಖಲಿಸಿ, ಜೂ.30ರೊಳಗೆ ಶುಲ್ಕ ಪಾವತಿಸಬಹುದು. ಪಿಜಿಸಿಇಟಿ-2020ರ ಪರೀಕ್ಷೆಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಚುರಪಡಿಸಲಾಗುವುದು ಎಂದು ಕೆಇಎ ತಿಳಿಸಿದೆ.
ವೇಳಾಪಟ್ಟಿ: ಆ.8ರ ಬೆಳಗ್ಗೆ 10.30ರಿಂದ 12.30ರ ವರೆಗೆ ಎಂ.ಇ ಹಾಗೂ ಎಂ.ಟೆಕ್ ಕೋರ್ಸ್ಗೆ ಸಂಬಂಧಿಸಿದ ಟೈಪ್-ಬಿ: ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳು (ದಾವಣಗೆರೆ ಮತ್ತು ಮೈಸೂರು) ನಡೆಯಲಿವೆ. ಮಧ್ಯಾಹ್ನ 2.30ರಿಂದ 4.30ರ ವರೆಗೆ ಟೈಪ್-ಎ: ವಿಟಿಯು, ಯುವಿಸಿಇ, ಯುಬಿಡಿಟಿಸಿಇ ಕೋರ್ಸ್ಗಳಿಗೆ ಸಂಬಂಧಿಸಿದ ಪರೀಕ್ಷೆಗಳು ನಡೆಯಲಿದೆ. ಆ.9ರ ಬೆಳಗ್ಗೆ 10.30ರಿಂದ 12.30ರವರೆಗೆ ಎಂಸಿಎ ಮೊದಲ ವರ್ಷದ 1 ಸೆಮಿಸ್ಟರ್ನ ಪ್ರವೇಶ ಪರೀಕ್ಷೆ ಹಾಗೂ ಮಧ್ಯಾಹ್ನ 2.30ರಿಂದ 4.30ರ ವರೆಗೆ ಎಂಬಿಎ ಮೊದಲ ವರ್ಷದ 1 ಸೆಮಿಸ್ಟರ್ನ ಪ್ರವೇಶ ಪರೀಕ್ಷೆ ನಡೆಯಲಿದೆ.