

ತಿರುವನಂತಪುರಂ: ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಬ್ಯಾಂಕ್ ಖಾತೆಗಳಿಗೆ ಕಳೆದ ಕೆಲ ವರ್ಷಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ಜಮೆ ಆಗಿದೆ. ಜಾರಿ ನಿರ್ದೇಶನಾಲಯವು ಪಿಎಫ್ಐ ವಿರುದ್ಧದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಈ ವಿಚಾರ ಹೊರಬಿದ್ದಿದೆ.
2014ರ ನಂತರ ಸಂಘಟನೆಯ ಹಣ ವರ್ಗಾವಣೆ, ಜಮೆ ವಹಿವಾಟು ಹೆಚ್ಚಾಗಿದೆ. ಬಹುಪಾಲು ಹಣ ನಗದು ರೂಪದಲ್ಲೇ ಜಮೆ ಆಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯಲ್ಲೂ ಪಿಎಫ್ಐ ಭಾಗವಹಿಸಿತ್ತು. ಈ ಪ್ರತಿಭಟನೆಗೆ ಸಂಘಟನೆಗೆ ಹಣ ಪೂರೈಕೆ ಆಗಿರಬಹುದು ಎನ್ನಲಾಗಿದೆ.
ಫ್ರೆಬವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಗಳಲ್ಲೂ ಪಿಎಫ್ಐ ಪಾತ್ರವಿರುವ ಸಾಧ್ಯತೆಯಿದೆ. ಈ ಗಲಭೆಗಳಲ್ಲಿ ಪಿಎಫ್ಐನ ರಾಜಕೀಯ ಘಟಕ, ಎಸ್ಡಿಪಿಐ ಭಾಗಿಯಾಗಿತ್ತು ಎನ್ನುವುದಕ್ಕೆ ಕೆಲ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಎನ್ನಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಿಎಫ್ಐ ವಿದ್ಯಾರ್ಥಿ ಘಟಕದ ನಾಯಕ ಕೆ.ಎ.ರವೂಫ್ ಷರೀಫ್ರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ಕಸ್ಟಡಿಯ ಅವಧಿ ವಿಸ್ತರಣೆ ಕೋರಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ. ಇಡಿ ಕೋರಿಕೆಯ ಮೇರೆಗೆ ಕಸ್ಟಡಿ ಅವಧಿಯನ್ನು ಮೂರು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. (ಏಜೆನ್ಸೀಸ್)