

‘ಯದ್ಭಾವಂ ತದ್ಭವತಿ’ ಎನ್ನುವಂತೆ ನಾವು ಏನನ್ನು ಆಲೋಚಿಸುತ್ತಿರುತ್ತೇವೆಯೋ, ಹಾಗೆ ನಮ್ಮ ವ್ಯಕ್ತಿತ್ವವು ಮೂಡುತ್ತದೆ. ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಆಲೋಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ನಮ್ಮ ಆಲೋಚನೆಗಳಿಂದ ನಮ್ಮ ಕರ್ಮವು ಪ್ರೇರೇಪಿತವಾಗಿರುತ್ತದೆ. ನಾವು ಮಾಡುವ ಕರ್ಮಗಳಿಂದ ಸಂಸ್ಕಾರ ಉಂಟಾಗುತ್ತದೆ. ಅದರಿಂದ ಚಾರಿತ್ರ್ಯವು ರೂಪುಗೊಳ್ಳುತ್ತದೆ. ಅದನ್ನೇ ನಾವು ವ್ಯಕ್ತಿತ್ವವೆಂದು ಕರೆಯುತ್ತೇವೆ. ಯಶಸ್ಸು, ಕೀರ್ತಿ- ಅಪಕೀರ್ತಿಗಳು ವ್ಯಕ್ತಿತ್ವದ ಮೇಲೆ ನಿರ್ಧಾರವಾಗಿರುತ್ತವೆ. ಆದ್ದರಿಂದ ಆಲೋಚನೆ, ಚಿಂತನೆಗಳಿಗೆ ತಕ್ಕಂತೆ ನಾವು ಕಾರ್ಯಮಾಡಲು, ವ್ಯವಹರಿಸಲು ಪ್ರಾರಂಭಿಸುತ್ತೇವೆ.
ಅನುಕೂಲ ಪರಿಸ್ಥಿತಿಯಲ್ಲಿ ಅಥವಾ ಸುಮ್ಮನೆ ಕುಳಿತಾಗ ನಮಗರಿ ವಿಲ್ಲದೆಯೇ ನಮ್ಮ ಮುಖ್ಯ ಆಲೋಚನೆಯು ಮೂಡುತ್ತದೆ. ಅದು ಒಳ್ಳೆಯದೂ ಅಥವಾ ಕೆಟ್ಟ ಆಲೋಚನೆಯೂ ಆಗಿರಬಹುದು. ಉದಾಹರಣೆಗೆ ರಾಮ- ರಾವಣರು. ರಾವಣನು ಮಹಾಭಕ್ತ, ವೀರ, ಶೂರನಾಗಿದ್ದರೂ ತಪ್ಪು ಆಲೋಚನೆಗಳಿಂದ ಅವನ ಕರ್ಮ, ಸಂಸ್ಕಾರ, ಚಾರಿತ್ರ್ಯವು ದುಷ್ಟತನದಿಂದ ಕೂಡಿತ್ತು. ಅವನ ತಪ್ಪು ಕೆಲಸಗಳು ಅಪಕೀರ್ತಿಯನ್ನು ತಂದಿತು. ಕುಲವನ್ನು, ಸ್ವಜನರನ್ನೂ ನಾಶಪಡಿಸಿತು. ಆದರೆ ಶ್ರೀರಾಮಚಂದ್ರನು ಮಾಡಿದ ಒಳ್ಳೆಯ ಆಲೋಚನೆಗಳಿಂದ ಅವನ ಚಿಂತನೆ, ಸಂಸ್ಕಾರ, ಚಾರಿತ್ರ್ಯ ಮತ್ತು ವ್ಯಕ್ತಿತ್ವ ರತ್ನದಂತೆ ಶೋಭಿಸಿತು. ಕುಲ, ದೇಶಕ್ಕೆ ಮೆರುಗನ್ನು, ಕೀರ್ತಿಯನ್ನು ತಂದಿತು. ಆದ್ದರಿಂದ ಸದಾ ಒಳ್ಳೆಯ ಚಿಂತನೆಗಳನ್ನು ಮಾಡಬೇಕು. ಅದರಿಂದ ನಮಗೂ ಒಳಿತು, ಸಮಾಜಕ್ಕೂ ಒಳಿತು.
ಪಾದ್ರಿಯೊಬ್ಬನು ಸದಾ ‘ಏನಿದು ನರಕ!’ ಎಂದು ಸುಮ್ಮನೆ ಉದ್ಗಾರ ಮಾಡುತ್ತಿದ್ದನು. ಕ್ರಮೇಣ ಅದು ಅವನಿಗೆ ಗೊತ್ತಿಲ್ಲದೆ ಅವನ ಬಾಯಿಂದ ಹೊರಬರುತ್ತಿತ್ತು. ಒಮ್ಮೆ ಅವನು ಸೇತುವೆಯ ಮೇಲೆ ಹಾದು ಹೋಗುತ್ತಿದ್ದನು. ಸೇತುವೆ ಶಿಥಿಲವಾಗಿತ್ತು. ಇವನ ಕರ್ಮದ ಫಲವೋ ಏನೋ ಎಂಬಂತೆ ಅದು ಮುರಿದು ಬಿತ್ತು. ಅವನ ಆರಾಧ್ಯ ದೇವನನ್ನು ನೆನೆಯುವ ಬದಲು. ‘ಏನಿದು ನರಕ!’ ಎಂದು ಜೋರಾಗಿ ಕೂಗುತ್ತಾ ಪ್ರಾಣ ಬಿಟ್ಟನು. ಏಕೆಂದರೆ ಅವನಿಗೆ ಅರಿವಿಲ್ಲದೆಯೇ ಅದು ಅವನ ಸ್ವಭಾವವಾಗಿತ್ತು.
ಕಾಲಪುರುಷನ ಆಗಮನವಾಗಲು, ಕಾಲಾತೀತವಾದ ತನ್ನ ಮೂಲಸ್ಥಾನವನ್ನು ರಾಮನು ಸೇರಿದನು. ಹೀಗೆ ವಾಲ್ಮೀಕಿಯೇ ಆಗಲಿ, ರಾಮನೇ ಆಗಲಿ, ಹೆಪ್ಪುಗಟ್ಟಿದ ಅಧರ್ಮದಿಂದ ತಪ್ಪು ಹೆಜ್ಜೆಯನ್ನಿಡುವವರಿಗೆ, ಒಪ್ಪುವ ದಂಡನೆಯನ್ನಿತ್ತಲ್ಲಿಯೇ ಧರ್ಮಸ್ಥಾಪನೆಯು ಸಾಧಿತವಾಗುವುದು - ಎಂಬ ಮುಖ್ಯ-ಬೋಧ ವನ್ನುಂಟುಮಾಡಿರುವರು. ಇದನ್ನಿಂದು ಮರೆತಿದ್ದೇವಲ್ಲವೇ?