

ನವದೆಹಲಿ: ಚೀನಾದಿಂದ ವಿದ್ಯುತ್ ಸರಬರಾಜು ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದ ಅನುಮತಿ ಕಡ್ಡಾಯ ಎಂದು ಕೇಂದ್ರ ಸಚಿವ ಆರ್.ಕೆ. ಸಿಂಗ್ ಹೇಳಿದ್ದಾರೆ. ಚೀನಾದಿಂದ ಯಾವುದೇ ವಿದ್ಯುತ್ ಸರಬರಾಜು ಉಪಕರಣಗಳು ಮತ್ತು ಘಟಕಗಳನ್ನು ಆಮದು ಮಾಡಿಕೊಳ್ಳಲು ಭಾರತೀಯ ಕಂಪನಿಗಳಿಗೆ ಸರ್ಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ಸೈಬರ್ ಬೆದರಿಕೆ ಅಪಾಯಗಳನ್ನು ನಿರ್ಣಯಿಸಲು ಸರ್ಕಾರ ಅವುಗಳನ್ನು ಪರಿಶೀಲಿಸುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಸಾಕಷ್ಟು ವಿದ್ಯುತ್ ಉಪಕರಣಗಳನ್ನು ತಯಾರಿಸಲಾಗುತ್ತದೆ. ಆದರೂ ಭಾರತ 71 ಸಾವಿರ ಕೋಟಿ ರೂ. ಮೌಲ್ಯದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಂಡಿದೆ. ಅದರಲ್ಲಿ ಸುಮಾರು 21 ಸಾವಿರ ಕೋಟಿ ರೂ. ಮೌಲ್ಯದ ಉಪಕರಣಗಳನ್ನು ಚೀನಾದಿಂದ ತರಿಸಲಾಗಿದೆ. ಇವುಗಳಲ್ಲಿ ಮಾಲ್ವೇರ್ ಮತ್ತು ಟ್ರೋಜನ್ ಹಾರ್ಸ್ ವೈರಸ್ ಇರಬಹುದು. ನಮ್ಮ ವಿದ್ಯುತ್ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಚೀನಾ ಅದನ್ನು ಉಪಯೋಗಿಸಬಹುದು. ಆತ್ಮನಿರ್ಭರ ಭಾರತ ಅಭಿಯಾನದ ಅನ್ವಯ ಭಾರತದಲ್ಲಿ ತಯಾರಿಸಲಾಗುವ ಯಾವ ವಸ್ತುಗಳನ್ನೂ ಆಮದು ಮಾಡಿಕೊಳ್ಳುವುದಿಲ್ಲ ಎಂದು ಸಚಿವ ಆರ್.ಕೆ. ಸಿಂಗ್ ತಿಳಿಸಿದ್ದಾರೆ.
ಭಾರತಕ್ಕೆ ಜಪಾನ್ ಬೆಂಬಲ
ಲಡಾಖ್ ಗಡಿ ವಿವಾದ ಕುರಿತು ಜಪಾನ್, ಭಾರತಕ್ಕೆ ಬೆಂಬಲ ನೀಡಿದೆ. ಭಾರತ ಮತ್ತು ಚೀನಾ ಗಡಿಯಲ್ಲಿ ವಾಸ್ತವ ನಿಯಂತ್ರಣ ರೇಖೆ ಉದ್ದಕ್ಕೂ ಉಥಾಸ್ಥಿತಿ ಬದಲಿಸುವ ಯಾವುದೇ ಏಕಪಕ್ಷೀಯ ಕ್ರಮವನ್ನು ವಿರೋಧಿಸುವುದಾಗಿ ಜಪಾನ್ನ ಭಾರತ ರಾಯಭಾರಿ ಸತೋಶಿ ಸುಜುಕಿ ಹೇಳಿದ್ದಾರೆ.