ಸಬ್ ರಿಜಿಸ್ಟ್ರಾರ್‌ಗಳ ವಿರುದ್ಧ ಎಫ್ಐಆರ್ ಗೂ ಮುನ್ನ ಬೇಕು ಅನುಮತಿ

dc dayanand 2
Published on

ಬೆಂಗಳೂರು: ಸಿವಿಲ್ ವ್ಯಾಜ್ಯ ಸಂಬಂಧ ನೋಂದಣಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವ ಮೊದಲು ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯುವಂತೆ ಪೊಲೀಸ್ ಇಲಾಖೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪತ್ರ ಬರೆದಿದೆ.

ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ. ದಯಾನಂದ್ ಅವರು ಪೊಲೀಸ್ ಇಲಾಖೆಯ ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್‌ಗೆ ಪತ್ರ ಬರೆದಿದ್ದಾರೆ. ಸಿವಿಲ್ ಆಸ್ತಿಯ ವ್ಯಾಜ್ಯ ಸಂಬಂಧ ದಾಖಲಾಗುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾ ನೋಂದಣಿಕಾರಿಗಳಿಗೆ, ಹಿರಿಯ ಸಬ್ ರಿಜಿಸ್ಟ್ರಾರ್‌ಗಳು, ಸಬ್ ರಿಜಿಸ್ಟ್ರಾರ್‌ಗಳು ಸೇರಿ ಅಧಿಕಾರಿ, ಸಿಬ್ಬಂದಿ ಪೊಲೀಸರು ನೋಟಿಸ್ ಜಾರಿ ಮಾಡುತ್ತಿದ್ದಾರೆ. ಅಲ್ಲದೆ, ಅಕ್ರಮದಲ್ಲಿ ನೋಂದಣಾಧಿಕಾರಿಗಳು ನೇರವಾಗಿ ಭಾಗವಹಿಸಿದ್ದಾರೆ ಎಂದು ಭಾವಿಸಿ ಎ್ಐಆರ್ ಕೂಡ ದಾಖಲಿಸಲಾಗುತ್ತಿದೆ. ಇದರಿಂದ ನೋಂದಣಾಧಿಕಾರಿಗಳಿಗೆ ದಿನನಿತ್ಯದ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

2022ರಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು/ನೌಕರರಿಗೆ ಸಂಬಂಧಿಸಿದಂತೆ ಸಿವಿಲ್ ಆಸ್ತಿಯ ಸಂಬಂಧ ದಾಖಲಾಗುವ ಎ್ಐಆರ್ ಮತ್ತು ನೋಟಿಸ್ ಜಾರಿ ಮಾಡುವ ಮೊದಲು ಸಕ್ಷಮ ಇಲಾಖಾ ಮುಖ್ಯಸ್ಥರಿಂದ ವರದಿ ಮತ್ತು ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಕಂದಾಯ ಇಲಾಖೆಯ ಅಧೀನ ಇಲಾಖೆಯಾದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ, ಸಿಬ್ಬಂದಿಗೂ ಅನ್ವಯ ಆಗಲಿದೆ ಎಂದು ಪತ್ರದಲ್ಲಿ ಐಜಿಆರ್ ಉಲ್ಲೇಖಿಸಿದ್ದಾರೆ.

ದಸ್ತಾವೇಜು ನೊಂದಣಿ ವೇಳೆ ಸುಳ್ಳು ದಾಖಲೆಗಳನ್ನು ಹಾಜರುಪಡಿಸಿದವರ ವಿರುದ್ಧ ನೋಂದಣಿ ನಿಯಮಗಳು 1965ರ ನಿಯಮ 198 ಮತ್ತು 201ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಬಹುದು. ಆದರೆ, ಸುಳ್ಳು ದಾಖಲೆಗಳನ್ನು ಅನುಕರಣೆ ಮಾಡಿದ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶ ಇರುವುದಿಲ್ಲ. ನೋಂದಣಿ ಕಾಯ್ದೆ 1908ರ ಕಲಂ 82ರಡಿ ಬರುವ ದೂರು ಅರ್ಜಿಗಳ ಕುರಿತಂತೆ ಕಾಯ್ದೆ ಕಲಂ 83ರ ಅನ್ವಯ ನೋಂದಣಿ ಅಧಿಕಾರಿಗಳು ನೀಡುವ ದೂರು ಬಂದಲ್ಲಿ ಪೊಲೀಸ್ ಅಧಿಕಾರಿಗಳು ಸ್ವೀಕರಿಸಿ ಪ್ರಕರಣ ದಾಖಲಿಸಬೇಕು ಹೊರತು ಅವರ ವಿರುದ್ಧ ಕೇಸ್ ದಾಖಲಿಸುವಂತಿಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿದೆ.

ನೋಂದಣಿ ಕಾಯ್ದೆ ಮತ್ತು ನೋಂದಣಿ ನಿಯಮಾವಳಿಗಳು 1965ರ ಪ್ರಕಾರ ನೋಂದಣಿ ಕಾರ್ಯ ನಿರ್ವಹಿಸಲು ಮತ್ತು ರಾಜಸ್ವ ಸಂಗ್ರಹಿಸಲು ಸಬ್ ರಿಜಿಸ್ಟ್ರಾರ್‌ಗಳನ್ನು ನೇಮಕ ಮಾಡಲಾಗಿದೆ. ಸ್ತಿರಾಸ್ತಿಯನ್ನು ಮಾರಾಟ ಮಾಡಲು ಅಧಿಕಾರ ಹೊಂದಿದ ಪಕ್ಷಗಾರರು ದಸ್ತಾವೇಜು ಬರೆದುಕೊಟ್ಟ ಬಗ್ಗೆ ಒಪ್ಪಿಕೊಂಡಲ್ಲಿ ಮತ್ತು ಸಂಬಂಧಿಸಿದ ದಾಖಲೆಗಳೊಂದಿಗೆ ಶುಲ್ಕ ಪಾವತಿಸಿದರೆ ನೋಂದಣಿ ತಿರಸ್ಕರಿಸುವ ಅಧಿಕಾರ ಉಪ ನೋಂದಣಾಧಿಕಾರಿಗಳಿಗೆ ಇರುವುದಿಲ್ಲ. ಜತೆಗೆ ದಸ್ತಾವೇಜುಗಳ ಸಿಂಧುತ್ವ ಪ್ರಶ್ನಿಸುವಂತಿಲ್ಲ. ಆದರಿಂದ ಸಿವಿಲ್ ವ್ಯಾಜ್ಯದ ಬಗ್ಗೆ ದೂರು ಬಂದರೇ ಇಲಾಖೆ ಮುಖ್ಯಸ್ಥರಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯುವಂತೆ ಠಾಣಾಧಿಕಾರಿಗಳಿಗೆ ಸೂಚಿಸುವಂತೆ ಪೊಲೀಸ್ ಇಲಾಖೆಗೆ ಐಜಿಆರ್ ಕೆ.ಎ. ದಯಾನಂದ್ ಪತ್ರ ಬರೆದಿದ್ದಾರೆ.

ಹೈಕೋರ್ಟ್ ನಿಲುವು ಏನು?

ಕಲಬುರಗಿ ಹೈಕೋರ್ಟ್ ನ್ಯಾಯಪೀಠ, ಉಪನೋಂದಣಾಧಿಕಾರಿಯ ವಿರುದ್ಧ ದಾಖಲಾಗಿದ್ದ ಎ್ಐಆರ್ ಅನ್ನು ರದ್ಧುಪಡಿಸಿದೆ. ಸಬ್‌ರಿಜಿಸ್ಟ್ರಾರ್‌ಗಳು ನೋಂದಣಿ ನಿಯಮಗಳು 1967ರ ನಿಯಮ 73ರಲ್ಲಿ ತಿಳಿಸಿರುವಂತೆ ದಾಖಲೆಗಳ ನೈಜತೆಯನ್ನು ಪರಿಶೀಲಿಸುವ ಅಧಿಕಾರ ಹೊಂದಿಲ್ಲ. ಅವರು ಕೇವಲ ರಾಜಸ್ವ ಸಂಗ್ರಹಿಸುವ ಅಧಿಕಾರಿಯಷ್ಟೇ ಎಂದು ಉಲ್ಲೇಖಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net