

ಚಿಕ್ಕಮಗಳೂರು: ಬರದ ತೀವ್ರತೆ ಕಾಫಿನಾಡಿಗೂ ತಟ್ಟಿದೆ. ಎಂದೆಂದೂ ನೀರಿನ ಕೊರತೆ ಎದುರಿಸದ ಚಿಕ್ಕಮಗಳೂರು ನಗರದಲ್ಲಿ ಈ ಬಾರಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ದುಸ್ಥಿತಿ ನಿರ್ಮಾಣವಾಗಿದೆ.
ಅಂತರ್ಜಲ ಮಟ್ಟ ದಿನೇ ದಿನೆ ಕುಸಿಯಲಾರಂಭಿಸಿದ್ದು ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಹೀಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸುವವರು ನಗರಸಭೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ನಗರಕ್ಕೆ ನೀರು ಒದಗಿಸುವ ಹಿರೇಕೊಳಲೆ ಕೆರೆಯಲ್ಲಿಯೂ ನೀರಿನ ಪ್ರಮಾಣ ತಗ್ಗಲಾರಂಭಿಸಿದೆ. ಅಲ್ಲದೆ ಈ ಕೆರೆಗೆ ಹರಿದು ಬರುತ್ತಿದ್ದ ಝರಿ ನೀರು ದಿನೇ ದಿನೆ ಕಡಿಮೆಯಾಗುತ್ತಿದೆ. ಹತ್ತಾರು ಝರಿಗಳು ಬತ್ತಿಹೋಗಿದ್ದು ಕೆಲವೇ ಝರಿಗಳಲ್ಲಿ ತೀರಾ ಕಡಿಮೆ ಮಟ್ಟದ ನೀರು ಹರಿದು ಬರುತ್ತಿದೆ. ಹೀಗಾಗಿ ಹಿರೇಕೊಳಲೆ ಕೆರೆ ಖಾಲಿಯಾಗುತ್ತಿದೆ. ಇದೆಲ್ಲವನ್ನೂ ಮನಗಂಡ ನಗರಸಭೆ ಹೊಸದಾಗಿ ಕೊಳವೆಬಾವಿ ಕೊರೆಯಿಸುವುದನ್ನು ನಿಷೇಧಿಸಿದೆ. ಆದರೆ ಅನಿವಾರ್ಯವಿದ್ದಾಗ ನಗರಸಭೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.
ಫೆಬ್ರವರಿ ಅಂತ್ಯದಿಂದಲೇ ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಕೊರೆಸಿದಂಥ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗತೊಡಗಿತು. ಮಾರ್ಚ್ ಅಂತ್ಯದೊಳಗಾಗಲೇ ಸಾಕಷ್ಟು ಕೊಳವೆ ಬಾವಿಗಳು ನೀರಿಲ್ಲದೆ ಬರಿದಾಗಿದ್ದವು. ಈ ಬಗ್ಗೆ ಸಾರ್ವಜನಿಕರು ನಗರಸಭೆಗೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ಹೊಸದಾಗಿ ಕೊಳವೆಬಾವಿ ಕೊರೆಯಿಸುವವರು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.