

ವಿಜಯನಗರ: ವಿಮೆ ಹಣಕ್ಕಾಗಿ ಸುಳ್ಳು ದೂರು ನೀಡಿದ ಮೂವರು ಆರೋಪಿಗಳ ಪೈಕಿ ಒಬ್ಬ ಸಿಕ್ಕಿಹಾಕಿಕೊಂಡಿದ್ದು, ಹಣ ಎಣಿಸಬೇಕಾಗಿದ್ದವ ಇದೀಗ ಕಂಬಿ ಎಣಿಸುತ್ತಿದ್ದಾನೆ. ಈ ಪ್ರಕರಣದಲ್ಲಿ ಗಂಗಾವತಿಯ ನಿವಾಸಿ ಮುಸ್ತಾಫ್ ಅಹಮ್ಮದ್ ಹಾಗೂ ಸೈಯದ್ ಜಾಫರ್ ಮತ್ತು ಇನ್ನೊಬ್ಬ ಆರೋಪಿಗಳು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಹೆದ್ದಾರಿಯಲ್ಲಿ ಹೋಗುವಾಗ ಅಪರಿಚಿತರು ಕಣ್ಣಿಗೆ ಝಂಡು ಬಾಂಬು ಹಚ್ಚಿ, ಹಲ್ಲೆ ಮಾಡಿ ಇನ್ನೋವಾ ಕಾರ್ ತೆಗೆದುಕೊಂಡು ಹೋಗಿದ್ದಾರೆಂದು ಈ ಆರೋಪಿಗಳು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ವಿಚಾರಣೆ ಕೈಗೊಂಡ ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದಾಗ ದೂರು ನೀಡಿದ್ದವರೇ ಹಿರೇಖೇಡ್ ಗ್ರಾಮದಲ್ಲಿ ವಾಹನ ಬಚ್ಚಿಟ್ಟು ವಿಮಾ ಕಂಪನಿಯಿಂದ ಹಣ ಲಪಟಾಯಿಸಲು ಹೊಂಚು ಹಾಕಿರುವ ಮಾಹಿತಿ ಲಭಿಸುತ್ತದೆ. ಆ ಮೇರೆಗೆ ಸಯ್ಯದ್ ಜಾಫರ್ ಎಂಬಾತನನ್ನು ಬಂಧಿಸಿದ್ದು, ಇನ್ನಿಬ್ಬರ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.