

Hindu monks : ಹಿಂದು ಸನ್ಯಾಸಿಗಳ ವೇಷದಲ್ಲಿ ಭಿಕ್ಷೆ ಬೇಡುತ್ತಿದ್ದ ಮೂವರು ಮುಸ್ಲಿಮರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಬಂಧಿತರನ್ನು ಫುಲ್ ಮಹಮ್ಮದ್, ಮಹಮ್ಮದ್ ಹದೀಶ್ ಹಾಗೂ ಲಾಲ್ಕು ಎಂದು ಗುರುತಿಸಲಾಗಿದೆ. ಈ ಮೂವರು ಹಿಂದು ಸನ್ಯಾಸಿಗಳ ವೇಷದಲ್ಲಿ ಗ್ರಾಮದಲ್ಲಿ ಭಿಕ್ಷೆ ಬೇಡುತ್ತಿದ್ದರು. ಅವರ ವರ್ತನೆಯನ್ನು ಕಂಡು ಅನುಮಾನಗೊಂಡ ಗ್ರಾಮಸ್ಥರು ಮೂವರನ್ನು ಹಿಡಿದು ಕೆಲವು ಅನುಮಾನಾಸ್ಪದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಸಿಟ್ಟಿಗೆದ್ದ ಸ್ಥಳೀಯರು ಮೂವರಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಈ ಮೂವರು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಧುಗಳಾಗಿ ಭಿಕ್ಷೆ ಬೇಡುತ್ತಾರೆ ಮತ್ತು ಅದರಿಂದಲೇ ತಮ್ಮ ಜೀವನವನ್ನು ನಡೆಸುತ್ತಾರೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಜಾಗೃತರಾಗಿದ್ದಾರೆ. ಅದರಲ್ಲೂ ಅಪರಿಚಿತ ವ್ಯಕ್ತಿ ಸಾಧು ವೇಷದಲ್ಲಿ ಗ್ರಾಮಕ್ಕೆ ಬಂದರೆ ಮತ್ತು ಅನುಮಾನಾಸ್ಪದವಾಗಿ ಕಂಡುಬಂದರೆ ಅಂತಹ ವ್ಯಕ್ತಿಗಳ ಮೇಲೆ ನಿಗಾ ಇಡುವುದು ಅಗತ್ಯ ಅಂದುಕೊಂಡಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಹಾಗೂ ಆಡಳಿತ ಮಂಡಳಿಯಿಂದ ಸಹಕಾರ ಕೋರಲಾಗಿದೆ. (ಏಜೆನ್ಸೀಸ್)