ತಿರುವನಂತಪುರಂ: ಯುಟ್ಯೂಬರ್ ದಂಪತಿ ( YouTuber Couple ) ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಪರಸ್ಸಾಲದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ದಂಪತಿಯನ್ನು ಪ್ರೀತು ಭವಾನಿಲ್ ಪ್ರಿಯಾ (37) ಮತ್ತು ಆಕೆಯ ಪತಿ ಸೆಲ್ವರಾಜ್ (45) ಎಂದು ಗುರುತಿಸಲಾಗಿದೆ. ಸೆಲ್ಸಸ್ ಫ್ಯಾಮಿಲಿ ( Cellus Family ) ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿದ್ದರು. ಮನೆಯ ಬೆಡ್ರೂಮ್ನಲ್ಲಿನ ಬೆಡ್ ಮೇಲೆ ಪ್ರಿಯಾ ಮೃತದೇಹ ಪತ್ತೆಯಾದರೆ, ಅದೇ ರೂಮ್ನಲ್ಲಿ ಸೆಲ್ವರಾಜ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದಂಪತಿಯ ಮಗ ಎರ್ನಾಕುಲಂನಲ್ಲಿ ವಾಸವಿದ್ದಾನೆ. ಆತ ಶುಕ್ರವಾರ ರಾತ್ರಿಯಷ್ಟೇ ಕರೆ ಮಾಡಿ ಮಾತನಾಡಿದ್ದ. ಶನಿವಾರ ಬೆಳಗ್ಗೆ ಎಷ್ಟೇ ಕರೆ ಮಾಡಿದರು ದಂಪತಿ ಸ್ವೀಕರಿಸಲಿಲ್ಲ. ಇದರಿಂದ ಆಘಾತಕ್ಕೆ ಒಳಗಾದ ಮಗ, ಶನಿವಾರ ರಾತ್ರಿ ಮನೆಗೆ ಆಗಮಿಸಿದ್ದಾನೆ. ಮನೆಯ ಗೇಟ್ ಒಳಗಿನಿಂದ ಲಾಕ್ ಆಗಿರುವುದು ಮತ್ತು ಮನೆಯ ಮುಂಭಾಗದ ಬಾಗಿಲು ಒರಗಿರುವುದನ್ನು ಗಮನಿಸಿದನು. ಹೇಗೋ ಮನೆಯನ್ನು ತೆರೆದು ನೋಡಿದಾಗ ಇಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಯೂಟ್ಯೂಬ್‌ನಲ್ಲಿ ತುಂಬಾ ಸಕ್ರಿಯರಾಗಿದ್ದ ಪ್ರಿಯಾ, ‘ವಿಡಪರುಂ ನೇರಂ’ ಸಾಲಿನೊಂದಿಗೆ ಆರಂಭವಾಗುವ ಹಾಡಿನ ಹಿನ್ನೆಲೆಯಲ್ಲಿ ಇಬ್ಬರ ವಿವಿಧ ಫೋಟೋಗಳು ಹಾಗೂ ವಿಡಿಯೋಗಳನ್ನು ಸೇರಿಸಿ ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದು ಈ ಚಾನಲ್‌ನಲ್ಲಿ ಕೊನೆಯ ವಿಡಿಯೋವಾಗಿದೆ. ಪ್ರತಿ ರಾತ್ರಿ ಯೂಟ್ಯೂಬ್‌ನಲ್ಲಿ ಲೈವ್ ಬರುತ್ತಿದ್ದ ಪ್ರಿಯಾ, ಗುರುವಾರ ಕೊನೆಯ ಬಾರಿಗೆ ಲೈವ್ ಬಂದಿದ್ದರು. ಕೊನೆಯ ಲೈವ್ ವೀಡಿಯೊದಲ್ಲಿ ಪ್ರಿಯಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಬಡ ಮಹಿಳೆಯರು, ಮಕ್ಕಳಿಗಾಗಿ ಆರೋಗ್ಯ ಸೇವಾ ಯೋಜನೆ ಘೋಷಣೆ ಮಾಡಿದ ನೀತಾ ಅಂಬಾನಿ | Nita Ambani