

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಏರತೊಡಗಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬಿಸಿಲಿನ ಕಾವು ಹೆಚ್ಚಿದೆ. ತೇವಾಂಶ ಭರಿತ ಮೋಡಗಳ ಸೆಳೆತ, ಗಾಳಿ ವೇಗ ಇಲ್ಲದಿರುವುದು, ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದಾಗಿ ಬಿಸಿಲಿನ ಝುಳವು ಜನರನ್ನು ಬಾಧಿಸುವಂತಾಗಿದೆ.
ಸಾಮಾನ್ಯವಾಗಿ ಬೇಸಿಗೆ ಮಾರ್ಚ್ನಿಂದ ಆರಂಭವಾಗಿ ಮೇ ತಿಂಗಳವರೆಗೆ ಇರುತ್ತದೆ. ಆದರೆ, ಬಾರಿ ವಾಡಿಕೆಗಿಂತ ಮುನ್ನವೇ ಶುರುವಾಗಿದೆ. ಈ ವರ್ಷ 4 ತಿಂಗಳು ಬೇಸಿಗೆ ಕಾಲ ಇರಲಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ಆದರೆ, ಫೆಬ್ರವರಿಯಲ್ಲೇ ಸುಡು ಬಿಸಿಲು ಕಾಣಿಸಿಕೊಳ್ಳುತ್ತಿದೆ. ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲಿ ಅಧಿಕವಾಗುವ ಸಾಧ್ಯತೆಯಿದೆ. ಈಗ ಪ್ರಸ್ತುತ ತಿಂಗಳಲ್ಲಿ ಬಿಸಿಲು ಝುಳ ತುಸು ಹೆಚ್ಚಳವಾಗಿರುವುದು ಆತಂಕ ತಂದೊಡ್ಡಿದೆ. ಹವಾಮಾನ ಅಸಮತೋಲನದಿಂದ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದೆ. ಪ್ರತಿವರ್ಷವೂ ದಕ್ಷಿಣ ಕರ್ನಾಟಕ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಧಾರವಾಡ, ಕೊಪ್ಪಳ, ಗದಗ, ಬಳ್ಳಾರಿ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗುತ್ತದೆ. ಹಲವು ವರ್ಷಗಳಿಂದಲೂ ಉತ್ತರ ಕರ್ನಾಟಕ, ಆಂಧ್ರಪದೇಶ ಹಾಗೂ ತೆಲಂಗಾಣದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು, ಶಾಖ ತರಂಗ (ಹೀಟ್ ವೇವ್) ಸ್ಥಿತಿ ಉಂಟಾಗಿದೆ.
ಈ ವರ್ಷವೂ ಅದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಏಪ್ರಿಲ್ ಮತ್ತು ಮೇನಲ್ಲಿ ಇದು ತುಸು ಹೆಚ್ಚಾಗುವ ಸಾಧ್ಯತೆಯಿದೆ. ಮಂಗಳವಾರ ಕಲಬುರಗಿಯಲ್ಲಿ 36.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿವಮೊಗ್ಗ, ಮಂಡ್ಯ, ಬೀದರ್, ಕೊಪ್ಪಳ, ವಿಜಯಪುರ, ಗದಗ, ರಾಯಚೂರು ಹಾಗೂ ದಾವಣಗೆರೆಯಲ್ಲಿ ಸರಾಸರಿ 34-35 ಡಿಗ್ರಿ, ಬೆಂಗಳೂರು, ಚಿತ್ರದುರ್ಗ, ಹಾಸನ, ಬೆಳಗಾವಿ, ಧಾರವಾಡ, ಹಾವೇರಿ, ಮೈಸೂರು ಸೇರಿ ಇತರ ಜಿಲ್ಲೆಗಳಲ್ಲಿ ಸರಾಸರಿ 31-33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಫೆಬ್ರವರಿಯಲ್ಲೇ ಬಿಸಿಲು ಅಧಿಕ: ರಾಜ್ಯದಲ್ಲಿ ಕಳೆದ ಫೆಬ್ರವರಿಗೆ ಹೋಲಿಸಿದರೆ ಈ ಬಾರಿ 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗಿದೆ. ಕಳೆದ ಫೆಬ್ರವರಿಯಲ್ಲಿ ವಾಡಿಕೆಯಷ್ಟೇ ಉಷ್ಣಾಂಶ ದಾಖಲಾಗಿತ್ತು. ಕಳೆದ ಮಾರ್ಚ್ ಮೊದಲ ವಾರದಲ್ಲಿ ಕರಾವಳಿಯಲ್ಲಿ ಉಷ್ಣ ಅಲೆ ಉಂಟಾಗಿತ್ತು. ಈ ಬಾರಿ ವಾತಾವರಣ ಹೇಗಿರಲಿದೆ ಎಂಬ ಬಗ್ಗೆ ಹವಾಮಾನ ಇಲಾಖೆ ಅಧ್ಯಯನ ಕೈಗೊಂಡಿದೆ. ಹಾಲಿ ತಿಂಗಳಿನಲ್ಲಿ ಕರಾವಳಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಬಾರಿ ರಣಬಿಸಿಲು ಹೆಚ್ಚಿರುತ್ತದೆ. ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಬಿಸಿಲು ಜಾಸ್ತಿ ಇರಲಿದ್ದು, ಕ್ರಮೇಣವಾಗಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ: ಬಿಸಿಲಿನ ಪರಿಣಾಮವಾಗಿ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಾಡಾಯಿಸಿದ್ದು, 782 ಗ್ರಾಮಗಳು ಹಾಗೂ 1,193 ವಾರ್ಡ್ಗಳನ್ನು ಸಮಸ್ಯಾತ್ಮಕವೆಂದು ಗುರುತಿಸಲಾಗಿದೆ. ಇಲ್ಲೆಲ್ಲ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಬೆಂಗಳೂರಿನ ಹಲವು ಬಡಾವಣೆಗಳಲ್ಲೂ ಸಮಸ್ಯೆ ಉಲ್ಬಣಿಸಿದೆ. ಟ್ಯಾಂಕರ್ಗೆ ದರವನ್ನು ಸರ್ಕಾರ ನಿಗದಿಗೊಳಿಸಿದೆ. ಹೆಚ್ಚುವರಿ ವಸೂಲಿ ಮಾಡಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಖಾಸಗಿಯವರಿಗೆ ಸರ್ಕಾರ ಎಚ್ಚರಿಕೆ ಕೊಟ್ಟಿದೆ. ಪರ್ಯಾಯ ನೀರಿನ ಮೂಲ ಗುರುತಿಸಲು, ಕೊಳವೆಬಾವಿ ಕೊರೆಸಲು, ಟ್ಯಾಂಕರ್ಗಳ ಮೂಲಕ ನೀರು ಪೂರೈಸಲು ಟೆಂಡರ್ ಸಿದ್ಧವಾಗಿಟ್ಟುಕೊಳ್ಳುವಂತೆ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ.
ನೀರಿಗಾಗಿ ಹಾಹಾಕಾರ: ರಣಬಿಸಿಲಿನ ಜತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಲಿಂಗನಮಕ್ಕಿ, ಹಾರಂಗಿ, ವರಾಹಿ, ತುಂಗಾ, ಕಬಿನಿ, ಕೆಆರ್ಎಸ್, ಭದ್ರಾ, ಘಟಪ್ರಭಾ, ಮಲಪ್ರಭಾ ಹಾಗೂ ಆಲಮಟ್ಟಿ ಸೇರಿ ರಾಜ್ಯದ ಜಲಾಯಶಗಳಲ್ಲಿ ಹಾಗೂ ಕೆರೆ-ಕುಂಟೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ಶೇಖರವಾಗಿದ್ದ ಅಲ್ಪ- ಸ್ವಲ್ಪ ನೀರಿನ ಮಟ್ಟವೂ ತಾಪಮಾನದಿಂದ ದಿನದಿಂದ ದಿನಕ್ಕೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆ-ಕುಂಟೆಗಳಲ್ಲಿ ಶೇ.50 ನೀರು ಬತ್ತಿಹೋಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಚಾಮರಾಜನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲೂ ಶೇ.60 ಕೆರೆ-ಕಟ್ಟೆಗಳಲ್ಲಿ ನೀರಿಲ್ಲ. 12 ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಜಲಾಶಯಗಳಲ್ಲಿ ನೀರಿದ್ದರೂ ಕುಡಿಯುವ ನೀರಿನ ಅಗತ್ಯ ನೀಗಿಸುವುದಿಲ್ಲ. ಜತೆಗೆ, ಕೊಳವೆಬಾವಿ ಅವಲಂಬನೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜ್ಯದಲ್ಲಿ ಹೆಚ್ಚಿದ ಗಂಟಲು ಬೇನೆ: ಬಿಸಿಲಿನ ಧಗೆ ಹಾಗೂ ಧೂಳು ಮತ್ತು ಶುಷ್ಕ ವಾತಾವರಣದಿಂದ ರಾಜ್ಯದೆಲ್ಲೆಡೆ ಗಂಟಲು ಬೇನೆ (ಅಪ್ಪರ್ ರೆಸ್ಪಿರೇಟರಿ ಟ್ರಾ್ಯಕ್ ಇನ್ಫೆಕ್ಷನ್) ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ರಾಜಧಾನಿಯ ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ವಾಣಿವಿಲಾಸ ಆಸ್ಪತ್ರೆಗಳಲ್ಲಿ ನಿತ್ಯ 10-20 ಪ್ರಕರಣಗಳು ವರದಿಯಾಗುತ್ತಿವೆ. ಜಿಲ್ಲಾಸ್ಪತ್ರೆಗಳಲ್ಲಿಯೂ ನಿತ್ಯದ ಕೇಸ್ಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಆರಂಭದಲ್ಲಿ ಗಂಟಲು ಕಟ್ಟಿದಂತಾಗಿ,ಕಿವಿಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬಳಿಕ ಒಣಕೆಮ್ಮು, ನೆಗಡಿ, ತಲೆನೋವು, ಮೈ-ಕೈ ನೋವಿನೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ತಂಪುಪಾನೀಯ, ಕಬ್ಬಿನಹಾಲು, ಮಜ್ಜಿಗೆ ಇತ್ಯಾದಿ ದ್ರವಾಹಾರಗಳು, ಐಸ್ಕ್ರೀಮ್ ಹಾಗೂ ಕತ್ತರಿಸಿದ ಹಣ್ಣುಗಳ ಮೊರೆ ಹೋಗುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶುಚಿತ್ವಕ್ಕೆ ಒತ್ತು ನೀಡದ ಕಾರಣ ಗಂಟಲು ಬೇನೆಯಂತಹ ಸಮಸ್ಯೆಗಳು ಹೆಚ್ಚುತ್ತಿದ್ದು, ಅದರಲ್ಲೂ ಸೈನಸ್ ತೊಂದರೆ ಇರುವವರು ತಣ್ಣನೆಯ ಪದಾರ್ಥಗಳನ್ನು ಸೇವಿಸುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ವೈದ್ಯರು ಹೇಳುತ್ತಾರೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ವೈರಾಣು ಸೋಂಕು ಬೇಗ ಹರಡುತ್ತದೆ. ಹೀಗಾಗಿ ಹೊರಗೆ ಹೋಗುವವರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳು ಸೇರಿ ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಈ ಬಾರಿ ಕನಿಷ್ಠ ತಾಪಮಾನದಲ್ಲಿಯೂ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ 37 ಡಿಗ್ರಿ ಸೆ. ವರೆಗೂ ಉಷ್ಣಾಂಶ ಏರುವ ಸಾಧ್ಯತೆಯಿದೆ. ಫೆಬ್ರವರಿ ಮೊದಲ ವಾರದಲ್ಲಿ ವಾಡಿಕೆಗಿಂತ 3 ಡಿಗ್ರಿ ಸೆ. ತಾಪಮಾನ ಜಾಸ್ತಿಯಾಗಿತ್ತು. 2ನೇ ವಾರದಲ್ಲಿ ಕಡಿಮೆಯಾಗಿದ್ದು, 3 ಮತ್ತು 4ನೇ ವಾರದಿಂದ ಮತ್ತೆ ಜಾಸ್ತಿಯಾಗಿದೆ. ಮಾರ್ಚ್-ಏಪ್ರಿಲ್ನಲ್ಲಿ ಹೆಚ್ಚು ಬಿಸಿಲು ಇರುವುದರಿಂದ ಎಚ್ಚರ ವಹಿಸಬೇಕಿದೆ.
| ಪ್ರಸಾದ್ ಹವಾಮಾನ ತಜ್ಞ