

ಚಿಕ್ಕಮಗಳೂರು: ಸನಾತನ ಧರ್ಮವನ್ನು ಡೆಂೆ, ಮಲೇರಿಯಾಕ್ಕೆ ಹೋಲಿಸಿದ್ದಲ್ಲದೆ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿ ಹಿಂದು ಧರ್ಮವನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಭಾರತೀಯ ಸಂವಿಧಾನದಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ಸಚಿವರಾಗಿ ಅಧಿಕಾರಕ್ಕೆ ಬಂದಿರುವ ಉದಯನಿಧಿ ಇತ್ತೀಚಿಗೆ ಸಮಾರಂಭವೊಂದರಲ್ಲಿ ಸನಾತನ ಹಿಂದು ಧರ್ಮವನ್ನು ಮೂಲೋತ್ಪಾಟನೆ ಮಾಡುವ ಹೇಳಿಕೆ ನೀಡಿರುವುದು ಸಮಾಜ ವಿರೋಧಿ ಎಂದು ಖಂಡಿಸಿದರು.
ಧರ್ಮದ ಆಧಾರದಲ್ಲಿ ಸನಾತನಿಗಳನ್ನು ಡೆಂೆ, ಮಲೇರಿಯಾಗಳಿಗೆ ಹೋಲಿಸಿ ಅಪಮಾನ ಮಾಡಿದ್ದಾರೆ. ವಿಶ್ವದಾದ್ಯಂತ ಇರುವ ಹಿಂದುಗಳ ಧಾರ್ಮಿಕ ಭಾವನೆಯನ್ನು ಉದ್ದೇಶ ಪೂರ್ವಕವಾಗಿ ಘಾಸಿಗೊಳಿಸಿದ್ದಾರೆ. ಸ್ಟಾಲಿನ್ ಇಂತಹ ಹೇಳಿಕೆ ನೀಡುವ ಮೂಲಕ ಶಾಂತಿ ಭಂಗ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.
ಸನಾತನ ಹಿಂದು ಸಮಾಜದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿ ದ್ವೇಷಮಯ ವಾತಾವರಣ ಸೃಷ್ಟಿಸಿದ್ದಾರೆ. ಸಮಾಜದಲ್ಲಿ ಸಾಮರಸ್ಯ ಕದಡಿ, ಸಮಾಜದ ನಡುವೆ ಸಂಘರ್ಷ ಹರಡುವ ಕೆಲಸ ಮಾಡಿದ್ದಾರೆ. ಇಂತಹ ಸಮಾಜ ವಿರೋಧಿ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಪ್ರಕರಣ ದಾಖಲಿಸಿ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ಜಿಲ್ಲಾ ಕಾರ್ಯದರ್ಶಿ ರಂಗನಾಥ, ಬಜರಂಗದಳ ಸಂಯೋಜಕ ಸಿ.ಟಿ.ಶಿವಕುಮಾರ್, ಮುಖಂಡರಾದ ಸಂತೋಷ್, ಪ್ರಮೋದ್, ಚಿನ್ನು ಇತರರಿದ್ದರು.